ಪ್ರಧಾನಿ ನರೇಂದ್ರ ಮೋದಿ
(ಸಂಗ್ರಹ ಚಿತ್ರ)
ಅರಾ: (ಬಿಹಾರ): ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಹುದ್ದೆಯನ್ನು ಕಸಿದುಕೊಂಡಿದೆ. ಅದರ ತಲೆಗೆ ಬಂದೂಕು ಇಟ್ಟು ತೇಜಸ್ವಿ ಯಾದವ್ ಅವರನ್ನು ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವಂತೆ ಬಲವಂತ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಅರಾದಲ್ಲಿ ಇಂದು (ಭಾನುವಾರ) ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಮಹಾಘಟಬಂಧನದೊಳಗೆ ಭಾರಿ ಒಳಜಗಳ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಆರ್‌ಜೆಡಿ- ಕಾಂಗ್ರೆಸ್ ಮೈತ್ರಿಕೂಟವು ಒಳನುಸುಳುಕೋರರನ್ನು ಬೆಂಬಲಿಸುವ ಮೂಲಕ ಬಿಹಾರದ ಗುರುತನ್ನು ನಾಶಮಾಡುವ ಕೆಲಸ ಮಾಡುತ್ತಿವೆ. ಇವರು ಬಿಹಾರದಲ್ಲಿ ನುಸುಳುಕೋರರನ್ನು ಬೆಂಬಲಿಸಿ ರ‍್ಯಾಲಿಗಳನ್ನು ನಡೆಸುತ್ತಿದ್ದಾರೆ. ಮತದಾರರು ಜಾಗರೂಕರಾಗಿರಬೇಕು ಮತ್ತು ಈ ಎರಡೂ ಪಕ್ಷಗಳ ಉದ್ದೇಶಗಳ ಬಗ್ಗೆ ತಿಳಿದಿರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮುಂಬರಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಘೋಷಿಸಲಾಗಿದೆ.
ಆರ್‌ಜೆಡಿ- ಕಾಂಗ್ರೆಸ್ ನಡುವೆ ಒಳಜಗಳ ಹೆಚ್ಚಿದೆ. ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪ್ರಸ್ತಾಪಿದ ಅಂಶಗಳಿಗೆ ಮನ್ನಣೆ ನೀಡಿಲ್ಲ. ಚುನಾವಣೆಗೆ ಮುನ್ನವೇ ಉಭಯ ಪಕ್ಷಗಳ ನಡುವೆ ಸಮಸ್ಯೆ ಹೆಚ್ಚಾಗಿವೆ. ಚುನಾವಣೆಯ ನಂತರ ಅವರು ಪರಸ್ಪರ ವಿರುದ್ಧವಾಗಿ ತಿರುಗಿ ಬೀಳುವ ಸಾಧ್ಯತೆ ಹೆಚ್ಚಿದೆ. ಇವರು ಬಿಹಾರಕ್ಕೆ ಎಂದಿಗೂ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಎಂದಿಗೂ ಆರ್‌ಜೆಡಿ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಬೇಕೆಂದು ಬಯಸಿರಲಿಲ್ಲ, ಆದರೆ ಆರ್‌ಜೆಡಿ ಅವಕಾಶವನ್ನು ಕಳೆದುಕೊಳ್ಳಲಿಲ್ಲ. ಕಾಂಗ್ರೆಸ್ ತಲೆಯ ಮೇಲೆ ಬಂದೂಕು ಇಟ್ಟು ಮುಖ್ಯಮಂತ್ರಿ ಹುದ್ದೆಯನ್ನು ಕಸಿದುಕೊಂಡಿತು. ತನ್ನ ಅಭ್ಯರ್ಥಿಯೇ ಮುಖ್ಯಮಂತ್ರಿ ಅಭ್ಯರ್ಥಿಯಾಗುವುದನ್ನು ಖಚಿತಪಡಿಸಿಕೊಂಡಿತು ಎಂದೂ ಅವರು ಹೇಳಿದ್ದಾರೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.