ಸಂಬಿತ್ ಪಾತ್ರ ಹಾಗೂ ತೇಜಸ್ವಿ ಯಾದವ್
ಕೃಪೆ: ಪಿಟಿಐ
ನವದೆಹಲಿ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ಎರಡು ಮತದಾರರ ಗುರುತಿನ ಚೀಟಿಗಳನ್ನು ಹೊಂದುವ ಮೂಲಕ ಅಪರಾಧವೆಸಗಿದ್ದಾರೆ ಎಂದು ಬಿಜೆಪಿ ಭಾನುವಾರ ಹೇಳಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಸಿ, ಚುನಾವಣಾ ಆಯೋಗವು ಪ್ರಕಟಿಸಿರುವ ಮತದಾರರ ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಕಾಣೆಯಾಗಿದೆ ಎಂದು ತೇಜಸ್ವಿ ಅವರು ಶನಿವಾರ (ಆಗಸ್ಟ್ 2 ರಂದು) ಆರೋಪಿಸಿದ್ದರು. ಆಯೋಗದ ವೆಬ್‌ಸೈಟ್‌ನಲ್ಲಿ ತಮ್ಮ ಎಲೆಕ್ಷನ್ ಫೋಟೊ ಐಡೆಂಟಿಟಿ ಕಾರ್ಡ್ (ಎಪಿಕ್–EPIC) ಸಂಖ್ಯೆ ನಮೂದಿಸಿದರೆ ಯಾವುದೇ ವಿವರ ಲಭ್ಯವಾಗುತ್ತಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದ್ದರು.
ಇದನ್ನೇ ಉಲ್ಲೇಖಿಸಿರುವ ಬಿಜೆಪಿ, ತೇಜಸ್ವಿ ಅವರ ಎಪಿಕ್ ಸಂಖ್ಯೆಗೂ, ಅವರು ಅಧಿಕೃತವಾಗಿ ಬಳಸುವ ಕಾರ್ಡ್ ಸಂಖ್ಯೆಗೂ ವ್ಯತ್ಯಾಸವಿದೆ ಎಂದಿದೆ.
ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು, ಎಸ್‌ಐಆರ್‌ಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್ ಮತ್ತು ಆರ್‌ಜೆಡಿಯ ಕೃತ್ಯಗಳು ಸಂಪೂರ್ಣ ಬಯಲಾಗಿವೆ ಎಂದಿದ್ದಾರೆ. ಮುಂದುವರಿದು, 'ನೀವು (ತೇಜಸ್ವಿ) ಸುಳ್ಳು ಹೇಳಿದ್ದೀರಾ? ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದೀರಾ?' ಎಂದು ಕೇಳಿದ್ದಾರೆ.
ತೇಜಸ್ವಿ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಉಲ್ಲೇಖಿಸಿದ ಗುರುತಿನ ಚೀಟಿಗೂ, 2020ರ ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ನಮೂದಿಸಿರುವ ಸಂಖ್ಯೆಗೂ ವ್ಯತ್ಯಾಸವಿದೆ ಎಂದು ಸಂಬಿತ್ ಪ್ರತಿಪಾದಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಅವರ ಮಿತ್ರ ತೇಜಸ್ವಿ, ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳನ್ನು ಅವಮಾನಿಸಲು, ದುರ್ಬಲಗೊಳಿಸಲು ಹಾಗೂ ಭಾರತದ ಘನತೆಯನ್ನು ಕುಗ್ಗಿಸಲು ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ತೇಜಸ್ವಿ ಅವರಂತಹ ನಾಯಕರೇ ಎರಡು ಮತದಾರರ ಗುರುತಿನ ಚೀಟಿಯನ್ನು ಹೊಂದಿರುತ್ತಾರೆ ಎಂದರೆ, ಅವರ ಪಕ್ಷದ ಕಾರ್ಯಕರ್ತರು ಇನ್ನೇನು ಮಾಡಬಹುದು ಎಂದು ಪ್ರಶ್ನಿಸಿರುವ ಸಂಬಿತ್, ತಮ್ಮ ಪಕ್ಷದ ಬೆಂಬಲವನ್ನು ಹೆಚ್ಚಿಸಿಕೊಳ್ಳಲು ಅವರು ಎರಡೆರಡು ಕಡೆ ಮತ ಚಲಾಯಿಸುತ್ತಾರೆ ಎಂಬುದನ್ನು ಇದು ತೋರುತ್ತದೆ ಎಂದು ಆರೋಪಿಸಿದ್ದಾರೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.