ADVERTISEMENT

ಹೊರಟಿದ್ದು ಬಿಹಾರಕ್ಕೆ, ತಲುಪಿದ್ದು ಬೆಂಗಳೂರು

ಎಲ್ಲಿಗೋ ಪಯಣ.. ಯಾವುದೋ ಹಾದಿ.. * ರೈಲ್ವೆ ಇಲಾಖೆಯ ಯಡವಟ್ಟು

ಅಭಯ್ ಕುಮಾರ್
Published 26 ಮೇ 2020, 20:07 IST
Last Updated 26 ಮೇ 2020, 20:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಟ್ನಾ: ಗುಜರಾತ್‌ನಿಂದ ವಲಸೆ ಕಾರ್ಮಿಕರನ್ನು ಹೊತ್ತು ಹೊರಟಿದ್ದ ಶ್ರಮಿಕ ವಿಶೇಷ ರೈಲು ಬಿಹಾರ ತಲುಪುವ ಬದಲು ಕರ್ನಾಟಕನ್ನು ತಲುಪಿದೆ. ಇದು ವಿಚಿತ್ರ ಎನಿಸಿದರೂ ಸತ್ಯ. 1,200 ಕಾರ್ಮಿಕರು ಪ್ರಯಾಣಿಸುತ್ತಿದ್ದ ಮತ್ತೊಂದು ರೈಲು ಸೂರತ್‌ನಿಂದ ಬಿಹಾರದ ಚಪ್ರಾ ನಿಲ್ದಾಣ ಪ್ರವೇಶಿಸಬೇಕಿತ್ತು. ಆದರೆ ಅದು ಹೋಗಿದ್ದು ಒಡಿಶಾದ ರೂರ್ಕೆಲಾಕ್ಕೆ. ಇಂತಹ ಇನ್ನೆರೆಡು ಘಟನೆಗಳು ನಡೆದಿವೆ. ಬಿಹಾರದ ಪಟ್ನಾ ತಲುಪಬೇಕಿದ್ದ ರೈಲುಗಳ ಪೈಕಿ ಒಂದು ಪಶ್ಚಿಮ ಬಂಗಾಳದ ಪುರುಲಿಯಾಕ್ಕೆ ಮತ್ತೊಂದು ಗಯಾವನ್ನು ಮುಟ್ಟಿವೆ.

ಭಾರತೀಯ ರೈಲ್ವೆಯ ನೂರಾರು ಶ್ರಮಿಕ ವಿಶೇಷ ರೈಲುಗಳು ಲಕ್ಷಾಂತರ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ತಲುಪಿಸಿವೆ. ನಿಗದಿತ ಗಮ್ಯ ಮುಟ್ಟಬೇಕಿದ್ದ ರೈಲುಗಳು ಇನ್ನೆಲ್ಲಿಗೋ ತಲುಪಿರುವುದು ಇಲಾಖೆಯ ಕಾರ್ಯನಿರ್ವಹಣೆ ಹಾಗೂ ವ್ಯವಸ್ಥೆ ಹಳಿತಪ್ಪಿದೆ ಎಂಬುದಕ್ಕೆ ನಿದರ್ಶನ.

ಸೂರತ್‌ನಿಂದ ಮೇ 16ಕ್ಕೆ ಹೊರಟಿದ್ದ ರೈಲು ಚಪ್ರಾವನ್ನು ಮೇ 18ಕ್ಕೆ ತಲುಪಬೇಕಿತ್ತು. ಆದರೆ ಹೋಗಿದ್ದು ಬೆಂಗಳೂರಿಗೆ. ಮತ್ತೆ ಅದೇ ರೈಲು ಚಪ್ರಾ ತಲುಪಿದ್ದು ಮೇ 25ರಂದು. ಅಂದರೆ 9 ದಿನಗಳ ಕಾಲ ಸುಡುವ ಬಿಸಿಲಿನಲ್ಲಿ ಪ್ರಯಾಣಿಸಿ ಬಳಲಿದ ಪ್ರಯಾಣಿಕರ ಸ್ಥಿತಿಯನ್ನು ವಿವರಿಸಲು ಸಾಧ್ಯವಿಲ್ಲ.

ADVERTISEMENT

ರೈಲ್ವೆ ಇಲಾಖೆಯ ಈ ಪ್ರಮಾದವನ್ನು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪೂರ್ವ ವಲಯ) ರಾಜೇಶ್ ಕುಮಾರ್ ಅಲ್ಲಗಳೆದಿದ್ದಾರೆ. ಆದರೆ ಉತ್ತರ ‍ಪ್ರದೇಶದಲ್ಲಿ ಪ್ರಜಾವಾಣಿಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಸೂರತ್‌ನಿಂದ ಹೊರಟಿದ್ದ 0912791 ಸಂಖ್ಯೆಯ ರೈಲು ಮಧ್ಯಪ್ರದೇಶದ ಭುಸಾವಲ್ ಎಂಬಲ್ಲಿ ಹಳಿ ಬದಲಿಸಿದೆ. ಹೀಗಾಗಿ ಉತ್ತರದ ಅಲಹಾಬಾದ್ ಮೂಲಕ ಚಪ್ರಾಗೆ ತೆರಳುವ ಬದಲು, ದಕ್ಷಿಣದ ಬೆಂಗಳೂರಿನ ಕಡೆಗೆ ಪಯಣ ಬೆಳೆಸಿದೆ. ಸೂರತ್–ಸಿವಾನ್ ಮಾರ್ಗದ ರೈಲಿನ ವಿಚಾರದಲ್ಲೂ ಇಂತಹದ್ದೇ ತಪ್ಪು ಆಗಿದೆ ಎಂದು ಹೆಸರು ಹೇಳಲಿಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಎರಡೂ ರೈಲುಗಳನ್ನು ಪತ್ತೆಹಚ್ಚಿ ಮೇ 25ರಂದು ಚಪ್ರಾ ಮತ್ತು ಸಿವಾನ್‌ಗೆ ಕರೆತರಲಾಯಿತು ಎಂದಿರುವ ಅವರು ಇದೊಂದು ಪ್ರಮುಖ ಲೋಪ ಎಂದು ಒಪ್ಪಿಕೊಂಡಿದ್ದಾರೆ.

‘ಮಾರ್ಗ ಬದಲಾವಣೆ ಸಾಮಾನ್ಯ’

‘ರಾಜ್ಯ ಸರ್ಕಾರಗಳ ಕೋರಿಕೆ ಮೇರೆಗೆ ಶ್ರಮಿಕ ವಿಶೇಷ ರೈಲು ಓಡಿಸಲಾಗುತ್ತಿದೆ. ಇದು ಸಂಪೂರ್ಣವಾಗಿ ರೈಲ್ವೆ ಇಲಾಖೆಯ ಲೋಪ ಅಲ್ಲ’ ಎಂದು ಅಧಿಕಾರಿಯೊಬ್ಬರು ಸ್ಪಷ್ಪಪಡಿಸಿದ್ದಾರೆ. ‘ಶ್ರಮಿಕ ರೈಲುಗಳ ವಿಚಾರದಲ್ಲಿ ರೈಲು ಹೊರಡುವ ನಿಲ್ದಾಣ ಹಾಗೂ ತಲುಪುವ ನಿಲ್ದಾಣಗಳು ಮಾತ್ರ ಮುಖ್ಯ. ಒಮ್ಮೆ ಗಮ್ಯ ತಲುಪಿದರೆ ಪ್ರಯಾಣ ಮುಗಿದಂತೆ. ಅದು ಯಾವ ಮಾರ್ಗದಲ್ಲಿ ಪ್ರಯಾಣಿಸಿತು ಎಂಬುದು ಮುಖ್ಯವಲ್ಲ. ಸಾಕಷ್ಟು ಬಾರಿ ದಟ್ಟಣೆಯ ಕಾರಣಕ್ಕೆ ಮುಖ್ಯ ಮಾರ್ಗಗಳ ರೈಲುಗಳನ್ನು ತಿರುಗಿಸಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.