ADVERTISEMENT

ಕಾಂಗ್ರೆಸ್‌ನ ಕ್ರೌಡ್‌ಫಂಡಿಂಗ್‌: ₹16 ಕೋಟಿ ಅಷ್ಟೇ ಸಂಗ್ರಹ, ವೇಗ ಪಡೆಯದ ಅಭಿಯಾನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2024, 14:24 IST
Last Updated 23 ಜನವರಿ 2024, 14:24 IST
ಅಜಯ್ ಮಾಕೆನ್
ಅಜಯ್ ಮಾಕೆನ್   

ನವದೆಹಲಿ: ಕಾಂಗ್ರೆಸ್‌ನ ಆನ್‌ಲೈನ್‌ ಕ್ರೌಡ್‌ಫಂಡಿಂಗ್‌ ಜಾರಿಯಾಗಿ ತಿಂಗಳು ಕಳೆದರೂ ವೇಗ ಪಡೆದಿಲ್ಲ. ಮೂರು ಲಕ್ಷ ದಾನಿಗಳಿಂದ ಇದುವರೆಗೆ ಕೇವಲ ₹16 ಕೋಟಿ ಅಷ್ಟೇ ದೇಣಿಗೆ ಸಂಗ್ರಹವಾಗಿದೆ.

ದೇಶದಾದ್ಯಂತ ಕಳೆದ ಡಿ.28ರಿಂದ ಆರಂಭಿಸಲು ಯೋಜಿಸಿದ್ದ, ಪ್ರತಿ ಬೂತ್‌ನ ಹತ್ತು ಮನೆಗಳಿಂದ ಕನಿಷ್ಠ ತಲಾ ₹138 ದೇಣಿಗೆ ಸಂಗ್ರಹಿಸುವ ಯೋಜನೆಯನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಪಕ್ಷದ ವರಿಷ್ಠ ರಾಹುಲ್‌ ಗಾಂಧಿ ಸಹಿಯುಳ್ಳ ಟೀಶರ್ಟ್, ಟೋಪಿ ಇನ್ನಿತರೆ ವಸ್ತುಗಳನ್ನು ಮಾರಾಟ ಮಾಡಿ ದೇಣಿಗೆ ಸಂಗ್ರಹಿಸುವ ಯೋಜನೆಗೂ ಚಾಲನೆ ಸಿಕ್ಕಿಲ್ಲ ಎನ್ನಲಾಗಿದೆ.

ADVERTISEMENT

ಎಐಸಿಸಿಯ ಪದಾಧಿಕಾರಿಗಳು ಸೇರಿದಂತೆ ರಾಜ್ಯ, ಜಿಲ್ಲಾ ಘಟಕದ ಪದಾಧಿಕಾರಿಗಳು ಕನಿಷ್ಠ ತಲಾ ₹1,380 ದೇಣಿಗೆ ನೀಡುವಂತೆ ಪಕ್ಷವು ಕೋರಿತ್ತು. ಈ ಯೋಜನೆಗಳ ಅನುಷ್ಠಾನಕ್ಕಾಗಿಯೇ ಖಜಾಂಚಿಯಾಗಿ ಅಜಯ್ ಮಾಕೆನ್ ಅವರನ್ನು ನೇಮಿಸಿದ್ದರೂ, ದೇಣಿಗೆ ಸಂಗ್ರಹ ಪ್ರಕ್ರಿಯೆ ಚುರುಕುಗೊಂಡಿಲ್ಲ.

‘ಪಕ್ಷದ 138 ನಾಯಕರನ್ನು ಜೈಪುರದಲ್ಲಿರುವ ತಮ್ಮ ಮನೆಗೆ ಕರೆಸಿಕೊಂಡಿದ್ದ ಸಚಿನ್ ಪೈಲಟ್‌, ಅವರೆಲ್ಲರಿಂದಲೂ ತಲಾ ₹1.38 ಲಕ್ಷವನ್ನು ದೇಣಿಗೆ ಕೊಡಿಸಿದ್ದಾರೆ. ದೇಣಿಗೆ ಕೊಡುವುದರಲ್ಲಿ ರಾಜಸ್ಥಾನ ಘಟಕ ಮುಂಚೂಣಿಯಲ್ಲಿದೆ’ ಎಂದು ಮಾಕೆನ್‌ ಮಂಗಳವಾರ ‘ಎಕ್ಸ್‌’ ಜಾಲತಾಣದಲ್ಲಿ ಉಲ್ಲೇಖಿಸಿದ್ದಾರೆ. 

‘ಈ ಅಭಿಯಾನವು ನಮಗೆ ಹಲವು ಪಾಠಗಳನ್ನು ಕಲಿಸಿದೆ. ಸ್ವಚ್ಛ ರಾಜಕಾರಣದ ಮಾರ್ಗವನ್ನು ತೋರಿಸಿದೆ. ಇದು ಯಶಸ್ವಿಯಾಗಿದೆ. ರಾಜಸ್ಥಾನದ 181 ಜನರು ತಲಾ ₹ 1ಲಕ್ಷಕ್ಕೂ ಹೆಚ್ಚಿನ ದೇಣಿಗೆ ನೀಡಿದ್ದಾರೆ. ಹರಿಯಾಣ (73), ಪಂಜಾಬ್ (38), ಮಹಾರಾಷ್ಟ್ರ (31), ಬಿಹಾರದ 28 ಜನರು ₹1 ಲಕ್ಷಕ್ಕೂ ಹೆಚ್ಚಿನ ದೇಣಿಗೆ ನೀಡಿದ್ದರೆ, ಕರ್ನಾಟಕದಿಂದ 11 ಜನರು ಕೊಟ್ಟಿದ್ದಾರೆ’ ಎಂದು ಹೇಳಿದ್ದಾರೆ.

ಈಚೆಗೆ ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿಯಲ್ಲೂ ನಿಧಾನಗತಿಯ ದೇಣಿಗೆ ಸಂಗ್ರಹದ ಬಗ್ಗೆ ಹಲವರು ರಾಹುಲ್‌ ಗಾಂಧಿ ಬಳಿ ಪ್ರಸ್ತಾಪಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ದೇಣಿಗೆ ಸಂಗ್ರಹಕ್ಕಾಗಿ ವೆಬ್‌ಸೈಟ್‌ ಆರಂಭಿಸಿದ ಮೊದಲ ಎರಡು ದಿನಗಳಲ್ಲೇ 20,400 ಬಾರಿ ಸೈಬರ್‌ ದಾಳಿ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.