ADVERTISEMENT

ದಿನ ಬೆಳಗಾದರೆ ನನ್ನ ವಿರುದ್ಧ ಅಭಿಯಾನ, ನಾನು ದುರ್ಬಲಗೊಳ್ಳುವುದಿಲ್ಲ: ಧನಕರ್

ಅವಿಶ್ವಾಸದ ಗದ್ದಲ, ಮುಂದುವರಿದ ಅನಿಶ್ಚಿತತೆ

ಪಿಟಿಐ
Published 13 ಡಿಸೆಂಬರ್ 2024, 15:27 IST
Last Updated 13 ಡಿಸೆಂಬರ್ 2024, 15:27 IST
<div class="paragraphs"><p>ಶುಕ್ರವಾರ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮಾತುಗಳನ್ನು ಸಭಾಪತಿ ಜಗದೀಪ್‌ ಧನಕರ್ ಆಲಿಸಿದರು </p></div>

ಶುಕ್ರವಾರ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮಾತುಗಳನ್ನು ಸಭಾಪತಿ ಜಗದೀಪ್‌ ಧನಕರ್ ಆಲಿಸಿದರು

   

–ಪಿಟಿಐ ಚಿತ್ರ

ನವದೆಹಲಿ: ರಾಜ್ಯಸಭೆಯ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ಜಗದೀಪ್‌ ಧನಕರ್ ಅವರ ವಿರುದ್ಧ ಅವಿಶ್ವಾಸ ನಿಲುವಳಿಗೆ ಮಂಡಿಸಲು ವಿರೋಧಪಕ್ಷಗಳು ಸಲ್ಲಿಸಿರುವ ನೋಟಿಸ್‌ ಶುಕ್ರವಾರ ಸದನದಲ್ಲಿ ತೀವ್ರ ಕೋಲಾಹಲ, ವಾಕ್ಸಮರಕ್ಕೆ ಕಾರಣವಾಯಿತು.

ADVERTISEMENT

ಧನಕರ್ ವಿರುದ್ಧದ ಅಸಮಾಧಾನ ಮತ್ತು ಅದಾನಿ ವಿವಾದದ ಪ್ರಸ್ತಾಪದಿಂದ ಈಗಾಗಲೇ ರಾಜ್ಯಸಭೆ ಕಲಾಪ ಹಳಿತಪ್ಪಿದೆ. ಗೊಂದಲದ ಸ್ಥಿತಿಯಿಂದಾಗಿ ಶುಕ್ರವಾರವು ಮೊದಲು ಒಂದು ಗಂಟೆಗೆ, ನಂತರ ಸೋಮವಾರದವರೆಗೂ ಕಲಾಪವನ್ನು ಮುಂದೂಡಲಾಯಿತು.

ಕೋಲಾಹಲದ ಸ್ಥಿತಿಯ ನಡುವೆಯೇ ಮಾತನಾಡಿದ ಧನಕರ್ ಅವರು, ‘ದಿನ ಬೆಳಗಾದರೆ ನನ್ನ ವಿರುದ್ಧ ಅಭಿಯಾನ ನಡೆಯುತ್ತಿದೆ. ಈ ಅಭಿಯಾನ ಕೇವಲ ನನ್ನ ವಿರುದ್ಧ ಅಲ್ಲ. ಇದು ನಾನು ಸೇರಿರುವ ಸಮುದಾಯದ ವಿರುದ್ಧವಾಗಿದೆ. ನಾನು ರೈತನ ಮಗ. ಈ ಬೆಳವಣಿಗೆಯಿಂದ ದುರ್ಬಲನಾಗುವುದಿಲ್ಲ’ ಎಂದು ಕಟುವಾಗಿ ಹೇಳಿದರು.

‘ಪ್ರಮುಖ ಪ್ರತಿಪಕ್ಷ ನನ್ನ ವಿರುದ್ಧ ನಿರಂತರ ಅಭಿಯಾನ ನಡೆಸುತ್ತಿರುವುದು ವ್ಯಕ್ತಿಗತವಾಗಿ ಬೇಸರ ಮೂಡಿಸಿದೆ. ನನ್ನ ವಿರುದ್ಧ ನಿಲುವಳಿ ತರಲು ಅವರಿಗೆ ಹಕ್ಕಿದೆ. ಅದು ಪ್ರತಿಪಕ್ಷಗಳ ಸಾಂವಿಧಾನಿಕ ಹಕ್ಕು. ಆದರೆ, ಅವರು ನಿಯಮಗಳನ್ನು ಮೀರುತ್ತಿದ್ದಾರೆ’ ಎಂದರು. 

ಕಲಾಪವನ್ನು ಸೋಮವಾರಕ್ಕೆ ಮುಂದೂಡುವ ಮುನ್ನ ಸಭಾನಾಯಕ ಜೆ.ಪಿ.ನಡ್ಡಾ, ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ, ‘ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಲು ಚರ್ಚೆ  ಮಾಡೋಣ. ಕೊಠಡಿ ಬನ್ನಿ. ಖರ್ಗೆ ಸ್ಪಂದಿಸುತ್ತಾರೆ ಎಂದು ಭಾವಿಸುತ್ತೇನೆ’ ಎಂದರು. 

ಕೋಪಗೊಂಡಂತಿದ್ದ ಖರ್ಗೆ ಅವರು ಈ ಮಾತಿಗೆ, ‘ನೀವು ನನಗೆ ಅವಮಾನಿಸಿದ್ದೀರಿ. ನಿಮ್ಮ ಮಾತಿಗೆ ಹೇಗೆ ಗೌರವಿಸಲಿ? ಎಂದು ಪ್ರತಿಕ್ರಿಯಿಸಿದರು. ಖರ್ಗೆ ಮಾತು ಮುಂದುವರಿಸಿದಂತೆ ಅತ್ತ ಸಭಾಧ್ಯಕ್ಷರು ಕಲಾಪವನ್ನು ಮುಂದೂಡಿದರು. 

ಇದಕ್ಕೂ ಮುನ್ನ ಧನಕರ್‌ ವಿರುದ್ಧದ ಅವಿಶ್ವಾಸ ನಿಲುವಳಿಗೆ ನೋಟಿಸ್‌ಗೆ ಸಂಬಂಧಿಸಿದ ಚರ್ಚೆಗೆ ಕ್ರಿಯಾಲೋಪ ಎತ್ತಿದ್ದ ಬಿಜೆಪಿಯ ರಾಧಾಮೋಹನ ದಾಸ್‌ ಅಗರವಾಲ್ ಅವರು ಮಾತನಾಡುವಾಗ ಗೊಂದಲದ ಸ್ಥಿತಿಯು ಮುಂದುವರಿಯಿತು. 

ದೀರ್ಘವಾಗಿ ಮಾತನಾಡಿದ ಅಗರವಾಲ್‌, ‘ಅವಿಶ್ವಾಸ ನಿಲುವಳಿ ನೋಟಿಸ್ ಉಪ ರಾಷ್ಟ್ರಪತಿಗಳ ಸ್ಥಾನ ಮತ್ತು ರೈತರಿಗೆ ಮಾಡುತ್ತಿರುವ ಅವಮಾನ. ನಿಯಮದ ಪ್ರಕಾರ, ನೋಟಿಸ್‌ ನೀಡಿದ 14 ದಿನ ಬಳಿಕ ಚರ್ಚೆಗೆ ಎತ್ತಿಕೊಳ್ಳಬಹುದು. ಆದರೆ, ಕಾಂಗ್ರೆಸ್‌ ನಾಯಕರು ಮಾಧ್ಯಮದ ಎದುರು ಆರೋಪ ಮಾಡುತ್ತಿದ್ದಾರೆ‘ ಎಂದರು.

ಪ್ರಥಮ ಪ್ರಧಾನಿ ನೆಹರೂ ಆಗಿನ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಅವರಿಗೆ ನಿರಂತರ ಅಪಮಾನ ಮಾಡುತ್ತಿದ್ದರು. ರಾಜಧಾನಿಯಲ್ಲಿ ಅವರ ಶವದ ಅಂತ್ಯಕ್ರಿಯೆಗೂ ಅವಕಾಶ ಸಿಗಲಿಲ್ಲ. ಕೊನೆಗಳಿಗೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಲಾಗಿತ್ತು‘ ಎಂದು ಆರೋಪಿಸಿದರು.

ಪ್ರಸಾದ್‌ ಅವರ ಅಂತ್ಯಕ್ರಿಯೆ ವಿಧಿಯಲ್ಲಿ ಭಾಗವಹಿಸಬಾರದು ಎಂದು ನೆಹರೂ ಅವರು ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಕೋರಿದ್ದರು.  ಆದರೆ, ರಾಧಾಕೃಷ್ಣನ್ ಅವರು ಈ ಮಾತಿಗೆ ಸ್ಪಂದಿಸಿರಲಿಲ್ಲ ಎಂದು ಅಗರವಾಲ್‌ ನಿಂದಿಸಿದರು.

ಅವಿಶ್ವಾಸ ನಿಲುವಳಿ ನೋಟಿಸ್‌ಗೆ ಸಹಿ ಹಾಕಿರುವ 60 ಸದಸ್ಯರ ವಿರುದ್ದ ತಾವು ಸಲ್ಲಿಸಿರುವ ಹಕ್ಕುಚ್ಯುತಿ ನೋಟಿಸ್‌ ಕುರಿತು ಮೊದಲು ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಕೋರಿದರು.

ಈ ಹಂತದಲ್ಲಿ ಸಭಾಪತಿ ಧನಕರ್ ಅವರು ಕಾಂಗ್ರೆಸ್‌ನ ಪ್ರಮೋದ್ ತಿವಾರಿ ಅವರಿಗೆ ಮಾತಿಗೆ ಅವಕಾಶ ಕಲ್ಪಿಸಿದರು. ತಿವಾರಿ ಅವರು ‘ಈ ಸರ್ಕಾರ ಕೋಟ್ಯಧಿಪತಿ ರಕ್ಷಣೆಗೆ ನಿಂತಿದೆ’ ಎನ್ನುತ್ತಿದ್ದಂತೆ ‘ಅವರ ಮಾತು ಕಡತಕ್ಕೆ ಹೋಗುವುದಿಲ್ಲ’ ಎಂದು ಸಭಾಪತಿ ಹೇಳಿದರು.

ಆಗ ಸಭಾಪತಿಯವರು, ವಿರೋಧಪಕ್ಷಗಳು ಸಲ್ಲಿಸಿರುವ ನೋಟಿಸ್‌ ಅನ್ನು ನಿಯಮಾನುಸಾರ 14 ದಿನದ ಬಳಿಕ ಚರ್ಚೆಗೆ ಎತ್ತಿಕೊಳ್ಳಲಾಗುವುದು ಎಂದರು. ಗೊಂದಲ ಮುಂದುವರಿದಾಗ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

ಇದಕ್ಕೂ ಮುನ್ನ, ‘ಕಲಾಪವನ್ನು ನಿಯಮಾನುಸಾರ ನಡೆಸಬೇಕು ಮತ್ತು ಸದಸ್ಯರು ಬಯಸಿರುವ ವಿಷಯಗಳ ಪ್ರಸ್ತಾಪಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಕೋರಿ ನಿಯಮ 267ರ ಅನ್ವಯ ನಾಲ್ಕು ನೋಟಿಸ್‌ಗಳು ಸಲ್ಲಿಕೆಯಾಗಿವೆ ಎಂದು ಸಭೆಗೆ ಮಾಹಿತಿ ನೀಡಿದರು.

ಇನ್ನು ನಾನು ಸಹಿಸಿಕೊಳ್ಳುವುದಿಲ್ಲ. ನಾನು ರೈತನ ಮಗ ದುರ್ಬಲಗೊಳ್ಳುವುದಿಲ್ಲ. ಈ ಅಭಿಯಾನ ನನ್ನ ವಿರುದ್ಧವಲ್ಲ. ನಾನು ಪ್ರತಿನಿಧಿಸುವ ಜಾತಿಯ ವಿರುದ್ಧ
-ಜಗದೀಪ್‌ ಧನಕರ್, ಸಭಾಪತಿ ರಾಜ್ಯಸಭೆ
ಕಾಂಗ್ರೆಸ್‌ ಪಕ್ಷವು ರೈತ ಮತ್ತು ಒಬಿಸಿ ವಿರೋಧಿ. ಆ ಪಕ್ಷಕ್ಕೆ ರೈತರು ದಲಿತರು ಮತ್ತು ಬಡವರು ಅಭಿವೃದ್ಧಿ ಹೊಂದುವುದು ಬೇಕಾಗಿಲ್ಲ   
-ಸುರೇಂದ್ರ ಸಿಂಗ್ ನಗರ್ ನೀರಜ್‌ ಶೇಖರ್ ಬಿಜೆಪಿ ಸದಸ್ಯರು ರಾಜ್ಯಸಭೆ
ಸಭಾಪತಿ ಧನಕರ್‌ ಅವರು ಕೃಷಿಕನ ಮಗನಾದರೆ ಖರ್ಗೆ ಅವರು ಕೃಷಿ ಕೂಲಿ ಕಾರ್ಮಿಕನ ಮಗ ಮತ್ತು ದಲಿತ. ಅವರಿಗೆ ಇಲ್ಲಿ ಮಾತನಾಡಲು ಅವಕಾಶವನ್ನೇ ನೀಡುತ್ತಿಲ್ಲ 
-ಪ್ರಮೋದ್ ತಿವಾರಿ ಕಾಂಗ್ರೆಸ್‌ ಸದಸ್ಯ ರಾಜ್ಯಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.