ಸಾಂದರ್ಭಿಕ ಚಿತ್ರ
ನವದೆಹಲಿ: ಸಂಘದ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸಲು ಇದ್ದ ನಿಷೇಧವನ್ನು ತೆರವುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಆರ್‌ಎಸ್‌ಎಸ್ ಸ್ವಾಗತಿಸಿದೆ. ಇದು ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ಅದು ಹೇಳಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಆರ್‌ಎಸ್‌ಎಸ್ ವಕ್ತಾರ ಸುನಿಲ್ ಅಂಬೇರ್, ‘ಸರ್ಕಾರದ ಈ ನಿರ್ಧಾರ ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಕಳೆದ 99 ವರ್ಷಗಳಿಂದ ರಾಷ್ಟ್ರದ ಪುನರ್ ನಿರ್ಮಾಣ ಮತ್ತು ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ’ ಎಂದು ಹೇಳಿದ್ದಾರೆ.
‘ರಾಷ್ಟ್ರೀಯ ಭದ್ರತೆ, ಏಕತೆ-ಸಮಗ್ರತೆ ಮತ್ತು ಪ್ರಕೃತಿ ವಿಕೋಪದ ಸಮಯದಲ್ಲಿ ಸಮಾಜವನ್ನು ಜೊತೆಯಲ್ಲಿ ಕೊಂಡೊಯ್ಯುವಲ್ಲಿ ಸಂಘದ ಕೊಡುಗೆಯಿಂದಾಗಿ, ದೇಶದ ವಿವಿಧ ರೀತಿಯ ನಾಯಕತ್ವವು ಕಾಲಕಾಲಕ್ಕೆ ಸಂಘದ ಪಾತ್ರವನ್ನು ಶ್ಲಾಘಿಸಿದೆ. ತನ್ನ ರಾಜಕೀಯ ಹಿತಾಸಕ್ತಿಗಳಿಂದಾಗಿ ಅಂದಿನ ಸರ್ಕಾರವು ಸರ್ಕಾರಿ ನೌಕರರನ್ನು ಸಂಘದಂತ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಆಧಾರರಹಿತವಾಗಿ ನಿಷೇಧಿಸಿತ್ತು’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.