ADVERTISEMENT

ಜಮ್ಮು ಮತ್ತು ಕಾಶ್ಮೀರ ಸದನದಲ್ಲಿ ‘ಫ್ಯಾಷನ್‌ ಷೋ’ ಗದ್ದಲ

ಪಿಟಿಐ
Published 10 ಮಾರ್ಚ್ 2025, 10:50 IST
Last Updated 10 ಮಾರ್ಚ್ 2025, 10:50 IST
   

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿನ ‘ಸ್ಕೈ ರೆಸಾರ್ಟ್‌’ನಲ್ಲಿ ರಂಜಾನ್‌ ತಿಂಗಳಲ್ಲಿ ಫ್ಯಾಷನ್‌ ಶೋ ಆಯೋಜಿಸಿದ್ದು ವಿವಾದದ ಸ್ವರೂಪ ಪಡೆದುಕೊಂಡಿದೆ. ಶೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ವಿರೋಧ ಪಕ್ಷಗಳು ವಿಧಾನಸಭೆಯಲ್ಲಿಯೂ ಈ ಬಗ್ಗೆ ಸೋಮವಾರ ಪ್ರಸ್ತಾಪಿಸಿ, ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡವು.

ಸೋಮವಾರ ಕಲಾಪ ಪ್ರಾರಂಭವಾಗುತ್ತಿದ್ದಂತೆ ಫ್ಯಾಷನ್ ಷೋ ವಿಷಯ ಪ್ರಸ್ತಾಪಿದ ಪೀಪಲ್‌ ಡೆಮಾಕ್ರೆಟಿಕ್‌ ಪಕ್ಷದ ಶಾಸಕ ಮೀರ್ ಮೊಹಮ್ಮದ್ ಫಯಾಜ್‌, ಪವಿತ್ರ ರಂಜಾನ್‌ ತಿಂಗಳಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲ ಮಾಡಿಕೊಟ್ಟಿರುವ ಬಗ್ಗೆ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.

ತನಿಖೆಗೆ ಆದೇಶ: ಒಮರ್‌

ADVERTISEMENT

ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ವಿಧಾನಸಭೆಯಲ್ಲಿ ಉತ್ತರ ನೀಡಿದ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ‘ಕಾರ್ಯಕ್ರಮದ ಬಗ್ಗೆ ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ. ಖಾಸಗಿ ಹೋಟೆಲ್‌ವೊಂದರಲ್ಲಿ ಮಾರ್ಚ್‌ 7ರಿಂದ ನಡೆದ ನಾಲ್ಕು ದಿನಗಳ ಖಾಸಗಿ ಕಾರ್ಯಕ್ರಮ ಇದಾಗಿತ್ತು. ಇದರಲ್ಲಿ ಸರ್ಕಾರದ ಪಾಲುದಾರಿಕೆ ಇರಲಿಲ್ಲ. ಶೋ ಬಗ್ಗೆ ಜನರಲ್ಲಿ ಆಕ್ರೋಶ ಮೂಡಿದೆ. ಇದರಲ್ಲಿ ತಪ್ಪೇನಿಲ್ಲ. 24 ಗಂಟೆಗಳ ಒಳಗೆ ವರದಿ ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ರಂಜಾನ್‌ ತಿಂಗಳಲ್ಲಿ ಮಾತ್ರವಲ್ಲ ವರ್ಷದ ಬೇರೆ ಯಾವ ತಿಂಗಳಲ್ಲಿಯೂ ಇಂಥ ಕಾರ್ಯಕ್ರಮಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಪ್ರವಾಸೋದ್ಯಮದ ಹೆಸರಿನಲ್ಲಿ ಅಶ್ಲೀಲತೆ: ಧರ್ಮಗುರು ಬೇಸರ

ಕಾಶ್ಮೀರದ ಮುಖ್ಯ ಧರ್ಮಗುರು ಮಿರ್ವೈಜ್‌ ಉಮರ್‌ ಫಾರೂಕ್‌ ಶೋ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ‘ಸೂಫಿ– ಸಂತರ ಸಂಸ್ಕೃತಿ ಇರುವ, ಆಳವಾದ ಧಾರ್ಮಿಕ ಭಾವನ ಹೊಂದಿರುವ ಜನರು ನೆಲೆಸಿರುವ ಕಾಶ್ಮೀರದಲ್ಲಿ ಇಂಥ ಕಾರ್ಯಕ್ರಮವನ್ನು ಹೇಗೆ ಸಹಿಸಿಕೊಳ್ಳುವುದು. ಪ್ರವಾಸೋದ್ಯಮದ ಹೆಸರಿನಲ್ಲಿ ಇಂಥ ಅಶ್ಲೀಲತೆಯನ್ನು ಸಹಿಸಲು ಸಾಧ್ಯವಿಲ್ಲ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ವಸ್ತ್ರವಿನ್ಯಾಸಕರಿಂದ ಕ್ಷಮೆಯಾಚನೆ:

ಫ್ಯಾಷನ್‌ ಶೋದ ವಸ್ತ್ರವಿನ್ಯಾಸಕರಾದ ಶಿವನ್‌ ಭಾಟಿಯಾ ಮತ್ತು ನರೇಶ್‌ ಕುಕ್‌ರೆಜಾ ಅವರು ಕ್ಷಮೆ ಕೇಳಿದ್ದಾರೆ. ಈ ಬಗ್ಗೆ ಇಬ್ಬರು ‘ಎಕ್ಸ್‌’ನಲ್ಲಿ ಕ್ಷಮಾಪಣಾ ಪತ್ರವನ್ನು ಹಂಚಿಕೊಂಡಿದ್ದಾರೆ. ‘ನಮ್ಮ ಹೃದಯದಲ್ಲಿ ಎಲ್ಲ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಗೌರವವಿದೆ. ಶೋ ಬಗ್ಗೆ ಎದ್ದಿರುವ ಆಕ್ಷೇಪದ ಬಗ್ಗೆ ತಿಳಿಯಿತು. ನಮ್ಮ ಕಾರ್ಯಕ್ರಮದಿಂದಾಗಿ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇವೆ. ನಮ್ಮ ಬ್ರ್ಯಾಂಡ್‌ಗೆ 15 ವರ್ಷ ತುಂಬಿದ ಸಂಭ್ರಮಕ್ಕಾಗಿಯಷ್ಟೇ ನಾವು ಶೋ ಆಯೋಜಿಸಿದ್ದೆವು. ಯಾರಿಗೂ ನೋವುಂಟು ಮಾಡುವ ಉದ್ದೇಶ ಇರಲಿಲ್ಲ. ಇನ್ನಷ್ಟು ಹೆಚ್ಚಿನ ಸೂಕ್ಷ್ಮತೆಯೊಂದಿಗೆ ಗೌರವದೊಂದಿಗೆ ಮುಂದೆ ಕೆಲಸ ಮಾಡುತ್ತೇವೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.