
ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಾಳೆ ಭಾರತಕ್ಕೆ ಆಗಮಿಸಲಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಹಲವು ವಿಷಯಗಳ ಕುರಿತಂತೆ ಮಾತುಕತೆ ನಡೆಸಲಿದ್ದು, ಒಪ್ಪಂದಗಳಿಗೂ ಬರುವ ಸಾಧ್ಯತೆ ಇದೆ.
ರಕ್ಷಣಾ ಸಹಕಾರವನ್ನು ಗಾಢಗೊಳಿಸುವುದು ಮತ್ತು ಅಮೆರಿಕದ ನಿರ್ಬಂಧಗಳಿಂದ ವ್ಯಾಪಾರವನ್ನು ಪ್ರತ್ಯೇಕಿಸುವುದು ಸೇರಿದಂತೆ ಹಲವಾರು ಒಪ್ಪಂದಗಳು ಕಾರ್ಯಸೂಚಿಯಲ್ಲಿವೆ.
ಕ್ರೆಮ್ಲಿನ್‌ನ ಮಾಧ್ಯಮ ಸಂಕ್ಷಿಪ್ತ ವಿವರಣೆಯ ಪ್ರಕಾರ, ಪುಟಿನ್ ಅವರ ವಕ್ತಾರ ಡಿಮಿಟ್ರಿ ಪೆಸ್ಕೋವ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ವಿಧಿಸಿರುವ ನಿರ್ಬಂಧಗಳಿಂದ ಭಾರತದೊಂದಿಗಿನ ವ್ಯಾಪಾರ ಸಂಬಂಧಗಳನ್ನು ರಕ್ಷಿಸುವ ಉದ್ದೇಶವನ್ನು ಈ ಭೇಟಿ ಒಳಗೊಂಡಿದೆ. ಇದಲ್ಲದೆ, ಭಾರತ ಮತ್ತು ರಷ್ಯಾ ನಡುವಿನ ಪ್ರಮುಖ ರಕ್ಷಣಾ ಒಪ್ಪಂದವನ್ನು ರಷ್ಯಾದ ಸಂಸತ್ತು ಸಹ ಅನುಮೋದಿಸಿದೆ.
ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿಯ ಪ್ರಮುಖ ಅಂಶಗಳು ಇಲ್ಲಿವೆ.
* ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಡಿಸೆಂಬರ್ 4ರಂದು ನವದೆಹಲಿಗೆ ಆಗಮಿಸುವ ಮೂಲಕ ಭಾರತದ ಪ್ರವಾಸ ಆರಂಭಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಪುಟಿನ್ ನಡುವೆ ವಾರ್ಷಿಕ ಭಾರತ-ರಷ್ಯಾ ಶೃಂಗಸಭೆಯ ಮಾತುಕತೆ ಡಿಸೆಂಬರ್ 5ರಂದು ನಡೆಯಲಿದೆ. ಉಕ್ರೇನ್ ವಿರುದ್ಧ ಯುದ್ಧ ಆರಂಭವಾದ ನಂತರ ಪುಟಿನ್ ಅವರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
* ಅಮೆರಿಕ ವಿಧಿಸಿರುವ ನಿರ್ಬಂಧಗಳಿಂದ ಭಾರತ-ರಷ್ಯಾ ವ್ಯಾಪಾರವನ್ನು ಪ್ರತ್ಯೇಕಿಸುವ ಕ್ರಮಗಳು, ಪರಮಾಣು ಶಕ್ತಿಗಾಗಿ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ ಪ್ರಸ್ತಾಪ ಮತ್ತು ರಕ್ಷಣಾ ಸಹಕಾರವನ್ನು ಗಾಢಗೊಳಿಸುವುದು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ನಡುವಿನ ಶೃಂಗಸಭೆಯ ಕಾರ್ಯಸೂಚಿಯಲ್ಲಿವೆ.
* ರಷ್ಯಾದ ಇಂಧನ ಮತ್ತು ಮಿಲಿಟರಿ ಉಪಕರಣಗಳ ಖರೀದಿಯನ್ನು ಕಡಿಮೆ ಮಾಡಲು ಅಮೆರಿಕದಿಂದ ಒತ್ತಡದ ಹಿನ್ನೆಲೆಯಲ್ಲಿ, ರಷ್ಯಾದೊಂದಿಗೆ ರಕ್ಷಣಾ ಮತ್ತು ಆರ್ಥಿಕ ಸಂಬಂಧಗಳನ್ನು ಪುನಶ್ಚೇತನಗೊಳಿಸುವ ಮೂಲಕ ಭಾರತವು ತನ್ನ ಕಾರ್ಯತಂತ್ರದ ಸ್ವಾಯತ್ತತೆಯನ್ನು ಒತ್ತಿಹೇಳಲು ಈ ಸಭೆಯನ್ನು ಒಂದು ಅವಕಾಶವೆಂದು ಪರಿಗಣಿಸುತ್ತಿದೆ ಎಂದು ವರದಿ ತಿಳಿಸಿದೆ.
* ಎರಡೂ ದೇಶಗಳು ಕೌಶಲ್ಯಪೂರ್ಣ ಮತ್ತು ಅರೆ ಕೌಶಲ್ಯಪೂರ್ಣ ಮಾನವಶಕ್ತಿಯ ಚಲನಶೀಲತೆಗಾಗಿ ಒಪ್ಪಂದವನ್ನು ಪೂರ್ಣಗೊಳಿಸಿವೆ. ಭಾರತ ಮತ್ತು ರಷ್ಯಾ ಸೇರಿದಂತೆ ಐದು ಸದಸ್ಯ ರಾಷ್ಟ್ರಗಳ ಯುರೇಷಿಯನ್ ಆರ್ಥಿಕ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದ(ಎಫ್‌ಟಿಎ) ಕುರಿತು ಕಳೆದ ವಾರ ಮಾತುಕತೆಗಳು ಪ್ರಾರಂಭವಾಗಿವೆ. ಈ ಸಂಬಂಧ ವ್ಯಾಪಾರಕ್ಕೆ ಸುಂಕ ಮತ್ತು ಸುಂಕ ರಹಿತ ಅಡೆತಡೆಗಳ ಬಗ್ಗೆ ಭಾರತದ ಕಳವಳಗಳನ್ನು ಪರಿಹರಿಸುವ ನಿರೀಕ್ಷೆ ಇದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
* ರಷ್ಯಾದ ಸಂಸತ್ತಿನ ಕೆಳಮನೆ, ಸ್ಟೇಟ್ ಡುಮಾ, ಫೆಬ್ರುವರಿ 18ರಂದು ಎರಡೂ ಸರ್ಕಾರಗಳು ಸಹಿ ಹಾಕಿದ ಪರಸ್ಪರ ಲಾಜಿಸ್ಟಿಕ್ ಬೆಂಬಲ ವಿನಿಮಯ (ಆರ್‌ಇಎಲ್‌ಒಎಸ್) ಒಪ್ಪಂದವನ್ನು ಮಂಗಳವಾರ ಅನುಮೋದಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.