
ನವದೆಹಲಿ: ಉಕ್ರೇನ್ ಸೇನೆಯು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ನಿವಾಸವನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಿದೆ ಎಂದು ರಷ್ಯಾ ಆರೋಪಿಸಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಯುದ್ದವನ್ನು ಕೊನೆಗಾಣಿಸಲು ಮತ್ತು ಶಾಂತಿಯನ್ನು ಕಾಪಾಡಲು ರಾಜತಾಂತ್ರಿಕತೆಯೇ ವಿಶ್ವಾಸಾರ್ಹ ಮಾರ್ಗವಾಗಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ರಷ್ಯಾದ ಅಧ್ಯಕ್ಷ ಪುಟಿನ್ ನಿವಾಸದ ಮೇಲೆ ದಾಳಿ ನಡೆದಿದೆ ಎಂದು ವರದಿಯಾಗಿದ್ದು, ನಾವು ತೀವ್ರ ಕಳವಳಗೊಂಡಿದ್ದೇವೆ. ಯುದ್ಧವನ್ನು ಅಂತ್ಯಗೊಳಿಸಲು ಮತ್ತು ಶಾಂತಿಯನ್ನು ಕಾಪಾಡಲು ರಾಜತಾಂತ್ರಿಕ ಪ್ರಯತ್ನಗಳೇ ಅತ್ಯಂತ ವಿಶ್ವಾಸಾರ್ಹ ಮಾರ್ಗವಾಗಿವೆ. ಇಂತಹ ಪ್ರಯತ್ನಗಳತ್ತ ಗಮನಹರಿಸುವಂತೆ ನಾವು ಸಂಬಂಧಪಟ್ಟ ಎಲ್ಲರನ್ನೂ ಒತ್ತಾಯಿಸುತ್ತೇವೆ' ಎಂದು ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಉಕ್ರೇನ್ ಸೇನೆಯು ಪುಟಿನ್ ಅವರ ನಿವಾಸವನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಿದೆ ಎಂದು ರಷ್ಯಾ ಸೋಮವಾರ ಆರೋಪಿಸಿದೆ. ಉಕ್ರೇನ್ ಜತೆಗಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಮಾತುಕತೆಯ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ರಷ್ಯಾ ಎಚ್ಚರಿಸಿದೆ.
‘ರಷ್ಯಾದ ನೊವ್‌ಗೊರೊಡ್ ಪ್ರಾಂತ್ಯದಲ್ಲಿರುವ ಪುಟಿನ್ ಅವರ ಅಧಿಕೃತ ನಿವಾಸವನ್ನು ಗುರಿಯಾಗಿಸಿ ಉಕ್ರೇನ್ 91 ಡ್ರೋನ್‌ಗಳನ್ನು ಹಾರಿಸಿದೆ. ನಮ್ಮ ವಾಯು ರಕ್ಷಣಾ ವ್ಯವಸ್ಥೆಯು ಎಲ್ಲವನ್ನೂ ಹೊಡೆದುರುಳಿಸಿದೆ’ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ರಷ್ಯಾ ಸೇನೆಯು ಈ ದಾಳಿಗೆ ಪ್ರತೀಕಾರದ ದಾಳಿ ನಡೆಸಲು ಉಕ್ರೇನ್‌ನ ಕೆಲವು ತಾಣಗಳನ್ನು ಆಯ್ಕೆ ಮಾಡಿದೆ. ಅದೇ ರೀತಿ, ಸಂಧಾನ ಮಾತುಕತೆಗೆ ಸಂಬಂಧಿಸಿದಂತೆ ರಷ್ಯಾ ತನ್ನ ನಿಲುವನ್ನು ಬದಲಿಸುವ ಸಾಧ್ಯತೆಯಿದೆ’ ಎಂದು ಅವರು ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.