ಶಬರಿಮಲೆ ದೇಗುಲ
–ಪಿಟಿಐ ಚಿತ್ರ
ಕೋಯಿಕ್ಕೋಡ್: ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಕಪ್ಪುಹಣ ವಹಿವಾಟು ನಡೆದಿದ್ದರೆ ಕೇಂದ್ರ ತನಿಖಾ ಸಂಸ್ಥೆಗಳು ಮಧ್ಯಪ್ರವೇಶಿಸಬಹುದು ಎಂದು ಕೇಂದ್ರ ಮೀನುಗಾರಿಕಾ, ಪಶು ಸಂಗೋಪನೆ ಹಾಗೂ ಹೈನುಗಾರಿಕೆ ಮತ್ತು ಅಲ್ಪಸಂಖ್ಯಾತ ಇಲಾಖೆಯ ರಾಜ್ಯ ಖಾತೆಯ ಸಚಿವರಾಗಿರುವ ಜಾರ್ಜ್ ಕುರಿಯನ್ ಹೇಳಿದ್ದಾರೆ. ಅಲ್ಲದೆ ಕಳ್ಳತನದಲ್ಲಿ ಭಾಗಿಯಾದವರನ್ನು ಅಯ್ಯಪ್ಪ ಸ್ವಾಮಿ ಸುಮ್ಮನೆ ಬಿಡುವುದಿಲ್ಲ ಎಂದು ಎಂದಿದ್ದಾರೆ.
ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿರುವುದರಿಂದ ಕೇಂದ್ರ ತನಿಖಾ ಸಂಸ್ಥೆಗಳೂ ಕಾನೂನಿನ ಪ್ರಕಾರ ಮಧ್ಯಪ್ರವೇಶ ಮಾಡಬಹುದು ಎಂದು ಅವರು ಹೇಳಿದ್ದಾರೆ. ಈ ಮಧ್ಯಪ್ರವೇಶವು ರಾಜಕೀಯವಲ್ಲ, ಕಾನೂನು ಪ್ರಕಾರ ನಡೆಯಲಿದೆ. ತನಿಖಾ ಸಂಸ್ಥೆಗಳು ಮಧ್ಯ ಪ್ರವೇಶಿಸಲಿದೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ.
ಪ್ರಕರಣದಲ್ಲಿ ಭಾಗಿಯಾದವರೆಲ್ಲಾ ‘ನಾಸ್ತಿಕ’ರು ಎಂದು ಹೇಳಿದ ಅವರು, ‘ನಾವು ನಮ್ಮ ಸೈದ್ಧಾಂತಿಕ ಕರ್ತವ್ಯವನ್ನು ನಿರ್ವಹಿಸಿದ್ದೇವೆ ಎನ್ನುವ ಅರಿವಿನೊಂದಿಗೆ ಅವರು ನಗುತ್ತಲೇ ಹೋಗಿದ್ದಾರೆ’ ಎಂದು ಸಚಿವರು ಹೇಳಿದ್ದಾರೆ.
ಸಿಪಿಐ(ಎಂ) ನಾಯಕತ್ವವೇ ಚಿನ್ನವನ್ನು ಲೂಟಿ ಮಾಡಿದೆ ಎಂದು ಆರೋಪಿಸಿದ ಅವರು, ‘ಪಕ್ಷದಲ್ಲಿ ಈಗ ಬಡತನ ಇಲ್ಲ. ಆದರೆ ಕಳವಳ ಪಡಬೇಕಾಗಿಲ್ಲ. ಸ್ವಾಮಿ ಅಯ್ಯಪ್ಪ ಯಾರನ್ನೂ ಸುಮ್ಮನೆ ಬಿಡುವುದಿಲ್ಲ’ ಎಂದು ಹೇಳಿದ್ದಾರೆ.
ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣ ಸಂಬಂಧ ಬಂಧಿತರಾಗಿರುವ ಸಿಪಿಐ (ಎಂ) ನಾಯಕ ಹಾಗೂ ತಿರುವಾಂಕೂರು ದೇವಸ್ವಂ ಬೋರ್ಡ್‌ನ (ಟಿಡಿಬಿ) ಮಾಜಿ ಅಧ್ಯಕರೂ ಆಗಿರುವ ಪದ್ಮಕುಮಾರ್ ಬಂಧನ ಸಂಬಂಧ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.