ADVERTISEMENT

ಶಬರಿಮಲೆ ಚಿನ್ನ ಕಳವು ಪ್ರಕರಣ: ಎಸ್‌ಐಟಿಯಿಂದ ಟಿಡಿಬಿ ಮಾಜಿ ಅಧ್ಯಕ್ಷನ ವಿಚಾರಣೆ

ಪಿಟಿಐ
Published 20 ನವೆಂಬರ್ 2025, 9:33 IST
Last Updated 20 ನವೆಂಬರ್ 2025, 9:33 IST
<div class="paragraphs"><p>ಶಬರಿಮಲೆ</p></div>

ಶಬರಿಮಲೆ

   

(ಪಿಟಿಐ ಚಿತ್ರ)

ತಿರುವನಂತಪುರ: ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು (ಗುರುವಾರ) ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದೆ.

ADVERTISEMENT

ಮಾಜಿ ಶಾಸಕರೂ ಆಗಿರುವ ಪದ್ಮಕುಮಾರ್ ಅವರನ್ನು ಕ್ರೈಮ್ ಬ್ರಾಂಚ್ ಕಚೇರಿಯಲ್ಲಿ ಎಸ್‌ಐಟಿ ವಿಚಾರಣೆ ನಡೆಸಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

2019ರಲ್ಲಿ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚಗಳು ಮತ್ತು ಗರ್ಭಗುಡಿ ಬಾಗಿಲು ಚೌಕಟ್ಟುಗಳನ್ನು ಎಲೆಕ್ಟ್ರೋಪ್ಲೇಟಿಂಗ್ ಮಾಡಲು ಮುಖ್ಯ ಆರೋಪಿ ಉನ್ನಿಕೃಷ್ಣನ್ ಪೋಟಿ ಅವರಿಗೆ ಹಸ್ತಾಂತರಿಸುವ ಪ್ರಸ್ತಾಪವನ್ನು ಪರಿಗಣಿಸಿದಾಗ ಪದ್ಮಕುಮಾರ್ ಟಿಡಿಬಿ ಅಧ್ಯಕ್ಷರಾಗಿದ್ದರು.

ಚಿನ್ನ ಲೇಪಿತ ಕವಚಗಳನ್ನು ಪೋಟಿಗೆ ಹಸ್ತಾಂತರಿಸಿದ್ದಾಗ ನಾನು ಮಂಡಳಿಯ ಅಧ್ಯಕ್ಷನಾಗಿರಲಿಲ್ಲ ಎಂದು ಪದ್ಮಕುಮಾರ್ ವಾದಿಸಿದ್ದರೂ, ಅವರ ಅಧಿಕಾರಾವಧಿಯಲ್ಲೇ ಪ್ರಸ್ತಾವನೆ ಪರಿಗಣಿಸಲಾಗಿತ್ತು ಎಂದು ಎಸ್‌ಐಟಿ ಹೇಳಿದೆ.

ಪದ್ಮಕುಮಾರ್ ಅವರಲ್ಲಿ ವಿಚಾರಣೆಗೆ ಹಾಜರಾಗುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ಅವರು ಹೆಚ್ಚಿನ ಸಮಯ ಕೋರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತ್ತನಂತಿಟ್ಟ ಜಿಲ್ಲೆಯ ಸಿಪಿಐ(ಎಂ) ಪಕ್ಷದ ಹಿರಿಯ ನಾಯಕ ಪದ್ಮಕುಮಾರ್, ಕೇರಳ ವಿಧಾನಸಭೆಯಲ್ಲಿ ಕೋಣಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಏತನ್ಮಧ್ಯೆ ಟಿಡಿಬಿ ಮಾಜಿ ಅಧ್ಯಕ್ಷ ಎನ್. ವಾಸು ಅವರನ್ನು ಎಸ್‌ಐಟಿ ಕಸ್ಟಡಿಗೆ ಒಪ್ಪಿಸಿ ಕೊಲ್ಲಂನ ವಿಜಿಲೆನ್ಸ್ ನ್ಯಾಯಾಲಯ ಆದೇಶಿಸಿದೆ.

ಎನ್‌.ವಾಸು ಅವರನ್ನು ಒಂದು ದಿನದ ಮಟ್ಟಿಗೆ ವಶಕ್ಕೆ ನೀಡುವಂತೆ ಎಸ್‌ಐಟಿ ಮನವಿ ಮಾಡಿತ್ತು. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಸಂಜೆ 4ಗಂಟೆಯವರೆಗೆ ಕಸ್ಟಡಿಗೆ ಒಪ್ಪಿಸಿದೆ.

ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಪೋಟಿ, ವಾಸು ಸೇರಿದಂತೆ ಈವರೆಗೆ ಐದು ಮಂದಿಯನ್ನು ಎಸ್‌ಐಟಿ ಬಂಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.