ಶಬರಿಮಲೆ
(ಪಿಟಿಐ ಚಿತ್ರ)
ಪತ್ತನಂತಿಟ್ಟ/ಕೇರಳ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ, ಬೆಂಗಳೂರು ಮೂಲದ ಉದ್ಯಮಿ ಉಣ್ಣಿಕೃಷ್ಣನ್ ಪೋಟಿ ಅವರನ್ನು ಅ.30ರವರೆಗೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ವಶಕ್ಕೆ ಒಪ್ಪಿಸಿ ರಾನ್ನಿ ಕೋರ್ಟ್ ಶುಕ್ರವಾರ ಆದೇಶಿಸಿದೆ.
‘ಕೆಲವರು ನಡೆಸಿರುವ ಕುತಂತ್ರಕ್ಕೆ ನಾನು ಬಲಿಯಾಗಿದ್ದೇನೆ. ನನ್ನನ್ನು ಈ ಪ್ರಕರಣದಲ್ಲಿ ಸಿಕ್ಕಿಸಿದವರನ್ನು ಕಾನೂನಿನ ಮುಂದೆ ತರಬೇಕು’ ಎಂದು ಉಣ್ಣಿಕೃಷ್ಣನ್ ಪೋಟಿ ನ್ಯಾಯಾಲಯದ ಆವರಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪೋಟಿಯನ್ನು ನ್ಯಾಯಾಲಯದಿಂದ ಹೊರಗೆ ಕರೆತರುವಾಗ, ಗುಂಪಿನಿಂದ ವ್ಯಕ್ತಿಯೊಬ್ಬ ಅವರತ್ತ ಚಪ್ಪಲಿ ತೂರಿದರು.
ಗುರುವಾರ ಬೆಳಿಗ್ಗೆ ಪೋಟಿಯನ್ನು ತಿರುವನಂತಪುರದ ಪುಳಿಮಾತ್‌ನ ಅವರ ನಿವಾಸದಲ್ಲಿ ಬಂಧಿಸಿದ್ದ ಪೊಲೀಸರು, ಕ್ರೈಂ ಬ್ರಾಂಚ್ ಕಚೇರಿಗೆ ಕರೆತಂದು 14 ಗಂಟೆ ಸತತ ವಿಚಾರಣೆಗೆ ಒಳಪಡಿಸಿದ್ದರು.
ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ತಾಮ್ರದ ಕವಚಕ್ಕೆ ಲೇಪಿಸಿದ್ದ ಚಿನ್ನ ಹಾಗೂ ಶ್ರೀಕೋವಿಲ್‌ನ ಬಾಗಿಲ ಚೌಕಟ್ಟಿನ ಚಿನ್ನದ ತೂಕ ಕಡಿಮೆಯಾಗಿರುವ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ. ಈ ಎರಡೂ ಪ್ರಕರಣಗಳಲ್ಲಿ ಉಣ್ಣಿಕೃಷ್ಣನ್ ಪೋಟಿ ಪ್ರಮುಖ ಆರೋಪಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಹೊರ ರಾಜ್ಯಗಳೂ ಸೇರಿ ಹಲವೆಡೆಯಿಂದ ಸಾಕ್ಷ್ಯಗಳನ್ನು ಸಂಗ್ರಹಿಸಬೇಕಿರುವುದರಿಂದ ಪೋಟಿ ಅವರನ್ನು 14 ದಿನ ವಶಕ್ಕೆ ನೀಡುವಂತೆ ಎಸ್‌ಐಟಿ ಮನವಿ ಮಾಡಿತ್ತು. ಅನಾರೋಗ್ಯದ ಕಾರಣದಿಂದ ಪೋಟಿಯನ್ನು ಎಸ್‌ಐಟಿ ವಶಕ್ಕೆ ನೀಡಬಾರದು ಎಂದು ಅವರ ಪರ ವಕೀಲರು ವಾದಿಸಿದರು. ಆದರೆ, ಕೋರ್ಟ್ ಇದನ್ನು ಒಪ್ಪಲಿಲ್ಲ. ಜತೆಗೆ ಚಿನ್ನ ಲೇಪನ ಕಾರ್ಯ ನಿರ್ವಹಿಸಿದ್ದ ಚೆನ್ನೈ ಮೂಲದ ಸ್ಮಾರ್ಟ್ ಕ್ರಿಯೇಷನ್ಸ್ ಮತ್ತು ಕೆಲವು ವ್ಯಕ್ತಿಗಳ ವಿರುದ್ಧವೂ ಸಮಗ್ರವಾದ ತನಿಖೆ ನಡೆಯಬೇಕಿದೆ ಎಂದು ಪ್ರಾಸಿಕ್ಯೂಷನ್ ಕೋರ್ಟ್‌ಗೆ ಮಾಹಿತಿ ನೀಡಿತು.
ಸದ್ಯ ಪೋಟಿಯನ್ನು ಪತ್ತನಂತಿಟ್ಟ ಪೊಲೀಸ್ ಕ್ಯಾಂಪ್‌ಗೆ ಸ್ಥಳಾಂತರಿಸಲಾಗಿದೆ. ಪ್ರಕರಣದ ತನಿಖೆ ಪೂರ್ಣಗೊಳಿಸಲು ಎಸ್‌ಐಟಿಗೆ ಕೇರಳ ಹೈಕೋರ್ಟ್ ಆರು ವಾರಗಳ ಗಡುವು ನಿಗದಿಪಡಿಸಿದೆ.
ಎಸ್‌ಐಟಿ ಉಣ್ಣಿಕೃಷ್ಣನ್ ಪೋಟಿ ಅವರ ಕಸ್ಟಡಿ ಕೋರಿ ಎಸ್‌ಐಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ‘ಆರೋಪಿಯು ದೇವಸ್ಥಾನದ ದ್ವಾರಪಾಲಕ ಮೂರ್ತಿಯ ಕವಚದಿಂದ 2 ಕೆ.ಜಿಯಷ್ಟು ಚಿನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಉಲ್ಲೇಖಿಸಲಾಗಿದೆ. ತನಿಖಾಧಿಕಾರಿ ಎಸ್.ಶಶಿಧರನ್ ಶುಕ್ರವಾರ ರಾನ್ನಿ ನ್ಯಾಯಾಲಯಕ್ಕೆ ಪೋಟಿ ಕಸ್ಟಡಿ ಕೋರಿ ಅರ್ಜಿ ಸಲ್ಲಿಸಿದರು. 2004ರಿಂದ 2008ರವರೆಗೆ ಉಣ್ಣಿಕೃಷ್ಣನ್ ಪೋಟಿ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಅರ್ಚಕರಿಗೆ ಸಹಾಯಕರಾಗಿದ್ದರು. 1998ರಲ್ಲಿ ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ತಾಮ್ರದ ಕವಚಕ್ಕೆ 2 ಕೆ.ಜಿಯಷ್ಟು ಚಿನ್ನ ಲೇಪನ ಮಾಡಿದ್ದರ ಬಗ್ಗೆ ಅವರಿಗೆ ಮಾಹಿತಿ ಇತ್ತು. ಇದನ್ನು ಗಮನದಲ್ಲಿ ಇಟ್ಟುಕೊಂಡು ಚಿನ್ನ ಕಳವಿಗೆ ಯೋಜನೆ ರೂಪಿಸಿದ ಆರೋಪಿ 2019ರಲ್ಲಿ ದ್ವಾರಪಾಲಕ ಮೂರ್ತಿಗಳ ತಾಮ್ರದ ಕವಚದ ರಿಪೇರಿ ಕೆಲಸ ಇದೆ ಎಂದು ದೇವಸ್ವಂ ಬೋರ್ಡ್‌ಗೆ ಅರ್ಜಿ ಸಲ್ಲಿಸಿದ್ದರು. ದ್ವಾರಪಾಲಕ ಮೂರ್ತಿಯಿಂದ ತಾಮ್ರದ ಕವಚವನ್ನು ತೆಗೆದು ಅದನ್ನು ದುರಸ್ತಿಗಾಗಿ ಕರ್ನಾಟಕ ತಮಿಳುನಾಡು ಆಂಧ್ರಪ್ರದೇಶ ಮತ್ತಿತರ ಕಡೆ ತೆಗೆದುಕೊಂಡು ಹೋಗಲಾಗಿತ್ತು. ಅಲ್ಲಿ ಚಿನ್ನವನ್ನು ಅಕ್ರಮವಾಗಿ ತೆಗೆದು ಅಂತಿಮವಾಗಿ ಚಿನ್ನದ ಮರು ಲೇಪನಕ್ಕಾಗಿ ಚೆನ್ನೈನ ಅಂಬತ್ತೂರ್ ಸಮೀಪದ ಸ್ಮಾರ್ಟ್ ಕ್ರಿಯೇಷನ್ಸ್ ಸಂಸ್ಥೆಗೆ ಒಪ್ಪಿಸಲಾಗಿತ್ತು. ಅಲ್ಲಿ ಕೇವಲ 394.9 ಗ್ರಾಂನಷ್ಟು ಚಿನ್ನವನ್ನು ಮಾತ್ರ ಮರುಲೇಪನಕ್ಕೆ ಬಳಸಲಾಗಿತ್ತು ಎಂದು ಎಸ್‌ಐಟಿ ಅರ್ಜಿಯಲ್ಲಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.