ADVERTISEMENT

ರಾಜಸ್ಥಾನ ರಾಜಕೀಯ ಬಿಕ್ಕಟ್ಟು | ಪೈಲಟ್ ಅರ್ಜಿ ವಿಚಾರಣೆ ಇಂದು

ಪಿಟಿಐ
Published 16 ಜುಲೈ 2020, 21:21 IST
Last Updated 16 ಜುಲೈ 2020, 21:21 IST
   
""

ಜೈಪುರ: ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ತಮ್ಮ ಶಾಸಕತ್ವವನ್ನು ಅನರ್ಹಗೊಳಿಸುವ ಸಂಬಂಧ ರಾಜಸ್ಥಾನ ವಿಧಾನಸಭಾ ಸ್ಪೀಕರ್‌ ನೀಡಿರುವ ನೋಟಿಸ್‌ನ ವಿರುದ್ಧ ಕಾಂಗ್ರೆಸ್‌ನ ಸಚಿನ್ ಪೈಲಟ್ ಮತ್ತು 18 ಶಾಸಕರು ರಾಜಸ್ಥಾನ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಶುಕ್ರವಾರ ಮಧ್ಯಾಹ್ನ ನಡೆಯಲಿದೆ.

ಗುರುವಾರ ಸಂಜೆ 7.30ಕ್ಕೆ ಅರ್ಜಿಯ ವಿಚಾರಣೆ ನಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ನ ವಿಭಾಗೀಯ ಪೀಠವು ಶುಕ್ರವಾರ ಮಧ್ಯಾಹ್ನಕ್ಕೆ ನಿಗದಿ ಮಾಡಿತು.

ರಾಜಸ್ಥಾನ ಹೈಕೋರ್ಟ್‌ನ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರ ಪೀಠದ ಎದುರು ಮಧ್ಯಾಹ್ನ 3 ಗಂಟೆಗೆ ಅರ್ಜಿಯು ವಿಚಾರಣೆಗೆ ಬಂದಿತ್ತು. ಆದರೆ, ಅರ್ಜಿದಾರರ ಪರ ವಕೀಲ ಹರೀಶ್ ಸಾಳ್ವೆ ಅವರು ಅರ್ಜಿಯನ್ನು ಪರಿಷ್ಕರಿಸಲು ಸಮಯಾವಕಾಶ ಕೋರಿದರು. ಮಧ್ಯಾಹ್ನ 5 ಗಂಟೆಗೆ ಅರ್ಜಿಯನ್ನು ಸಲ್ಲಿಸಲಾಯಿತು. ನಂತರ ಈ ಅರ್ಜಿಯನ್ನು ವಿಭಾಗೀಯ ಪೀಠಕ್ಕೆ ವರ್ಗಾಯಿಸಲಾಯಿತು.

ADVERTISEMENT

ಸಂಜೆ 7.30ಕ್ಕೂ ಮುನ್ನ ಹಾಜರಿರುವಂತೆ ವಕೀಲರಿಗೆ ಪೀಠವು ಸೂಚನೆ ನೀಡಿತ್ತು. ಆದರೆ, ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನಕ್ಕೆ ಮುಂದೂಡಲಾಯಿತು ಎಂದು ಕಾಂಗ್ರೆಸ್‌ನ ಮೂಲಗಳು ಹೇಳಿವೆ.

‘ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದೀರೆಂದು ಕಾಂಗ್ರೆಸ್ ದೂರು ನೀಡಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆಯನ್ನು ಶುಕ್ರವಾರ ಮಧ್ಯಾಹ್ನ 1ರ ಒಳಗೆ ನೀಡಿ. ಇಲ್ಲವೇ ಅನರ್ಹತೆಯನ್ನು ಎದುರಿಸಬೇಕಾಗುತ್ತದೆ’ ಎಂದು ಸ್ಪೀಕರ್ ನೀಡಿರುವ ನೋಟಿಸ್‌ನಲ್ಲಿದೆ. ನ್ಯಾಯಾಲಯದಲ್ಲಿ ವಿಚಾರಣೆಗೆ ಮುನ್ನವೇ ಸ್ಪೀಕರ್‌ ತೀರ್ಪು ನೀಡಿದರೆ ಪೈಲಟ್‌ ಬಣಕ್ಕೆ ಹಿನ್ನಡೆಯಾಗಬಹುದು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.