ನವದೆಹಲಿ: ಕಾಂಗ್ರೆಸ್ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಗುರುವಾರ ಭೇಟಿ ಮಾಡಿರುವ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಚರ್ಚೆ ನಡೆಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಿಂದ ಗೆಹಲೋತ್ ಹಿಂದಕ್ಕೆ ಸರಿದಿರುವ ಬೆನ್ನಲ್ಲೇ ಈ ಎಲ್ಲ ಬೆಳವಣಿಗೆಗಳು ಕಂಡುಬಂದಿವೆ.
ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ನೈತಿಕ ಹೊಣೆ ಹೊತ್ತುಕೊಂಡಿದ್ದ ಮುಖ್ಯಮಂತ್ರಿ ಅಶೋಕ್ ಗೆಹಲೋತ್, ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರು. ಅಲ್ಲದೆ ರಾಜಸ್ಥಾನ ಸಿಎಂ ಆಗಿ ಮುಂದುವರಿಯಬೇಕೇ ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಹೇಳಿದ್ದರು.
ಕಳೆದ ಭಾನುವಾರ ಕಾಂಗ್ರೆಸ್ ವೀಕ್ಷಕರನ್ನಾಗಿ ಕಳುಹಿಸಿದ್ದ ಅಜಯ್ ಮಾಕನ್ ಮತ್ತು ಮಲ್ಲಿಕಾರ್ಜುನ ಖರ್ಗೆ ಕರೆದಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಗೆ ಹಾಜರಾಗದೆ ಗೆಹಲೋತ್ ಬಣದ ನಿಷ್ಠಾವಂತ ಶಾಸಕರು ಪ್ರತ್ಯೇಕ ಸಭೆ ನಡೆಸಿರುವುದು ಪಕ್ಷದಲ್ಲಿ ಮತ್ತಷ್ಟು ಆಂತರಿಕ ಭಿನ್ನಮತ ಉಲ್ಪಣಗೊಳ್ಳಲು ಕಾರಣವಾಗಿತ್ತು.
ಬಳಿಕ ಸೋನಿಯಾ ಗಾಂಧಿ ಅವರಿಗೆ ಪಕ್ಷದ ವೀಕ್ಷಕರಾದ ಮಾಕನ್ ಹಾಗೂ ಖರ್ಗೆ ಲಿಖಿತ ವರದಿ ನೀಡಿ ಶಿಸ್ತಿನ ಕ್ರಮಕ್ಕೆ ಶಿಫಾರಸು ಮಾಡಿದ್ದರು.
ಅಲ್ಲದೆ ಗೆಹಲೋತ್ ಬಣದ ನಿಷ್ಠಾವಂತ ಸಚಿವರಾದ ಶಾಂತಿ ಧರಿವಾಲ್, ಮಹೇಶ್ ಜೋಶಿ ಮತ್ತು ಧರ್ಮೇಂದ್ರ ರಾಥೋಡ್ ಅವರಲ್ಲಿ ಶಿಸ್ತಿನ ಕ್ರಮ ಏಕೆ ಕೈಗೊಳ್ಳಬಾರದು ಎಂಬುದಕ್ಕೆ ಸಂಬಂಧಿಸಿದಂತೆ 10 ದಿನಗಳೊಳಗೆ ವಿವರಣೆ ನೀಡುವಂತೆ ಕೇಳಿದೆ.
ಜೈಪುರದಲ್ಲಿ ಧರಿವಾಲ್ ನಿವಾಸದಲ್ಲಿ ನಡೆದ ಪ್ರತ್ಯೇಕ ಸಭೆಯಲ್ಲಿ 82 ಶಾಸಕರು ಭಾಗಿಯಾಗಿದ್ದರು. ನೂತನ ಸಿಎಂ ಆಯ್ಕೆ ವಿಚಾರದಲ್ಲಿ ಹಲವು ಷರತ್ತುಗಳನ್ನು ವಿಧಿಸಿದ್ದರಲ್ಲದೆ ಸಾಮೂಹಿಕ ರಾಜೀನಾಮೆಯ ಬೆದರಿಕೆಯನ್ನು ಒಡ್ಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.