ADVERTISEMENT

ಉಪಮುಖ್ಯಮಂತ್ರಿ, ಪಿಸಿಸಿ ಅಧ್ಯಕ್ಷ ಸ್ಥಾನದಿಂದ ಸಚಿನ್‌ ಪೈಲಟ್‌ ವಜಾ

ಏಜೆನ್ಸೀಸ್
Published 14 ಜುಲೈ 2020, 8:32 IST
Last Updated 14 ಜುಲೈ 2020, 8:32 IST
ಸಚಿನ್‌ ಪೈಲಟ್‌
ಸಚಿನ್‌ ಪೈಲಟ್‌   

ಜೈಪುರ: ರಾಜಸ್ಥಾನ ತಮ್ಮದೇ ಸರ್ಕಾರದ ವಿರುದ್ಧ ಬಂಡೆದ್ದಿರುವ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನ ಮತ್ತು ಪಿಸಿಸಿ ಮುಖ್ಯಸ್ಥನ ಸ್ಥಾನದಿಂದ ಕಾಂಗ್ರೆಸ್‌ ವಜಾಗೊಳಿಸಿದೆ.

15ಕ್ಕೂ ಹೆಚ್ಚು ಶಾಸಕರನ್ನು ತಮ್ಮೊಂದಿಗೆ ಕರೆದೊಯ್ದು ದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಸಚಿನ್‌ ಪೈಲಟ್‌ ಅವರ ನಡೆಯಿಂದಾಗಿ ಅಶೋಕ್‌ ಗೆಹ್ಲೋಟ್‌ ಅವರ ನೇತೃತ್ವದ ರಾಜಸ್ಥಾನ ಕಾಂಗ್ರೆಸ್‌ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.

ಇದೇ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಇಂದು ತನ್ನ ಶಾಸಕಾಂಗ ಪಕ್ಷದ ಸಭೆ ಕರೆದಿತ್ತು. ಜೈಪುರದ ಫೇರ್‌ಮೌಂಟ್‌ ಹೋಟೆಲ್‌ನಲ್ಲಿ ನಡೆದ ಈ ಸಭೆಯಲ್ಲಿ ಪಕ್ಷದ 102 ಶಾಸಕರು ಭಾಗವಹಿಸಿದ್ದರು (ಸರಳ ಬಹುಮತದ ಸಂಖ್ಯೆ) ಎನ್ನಲಾಗಿದ್ದು ಸಚಿನ್‌ ಪೈಲಟ್‌ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಒತ್ತಾಯಿಸಿದರು ಎಂದು ಹೇಳಲಾಗಿದೆ. ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ADVERTISEMENT

ಇದರ ಬೆನ್ನಿಗೇ ಸಚಿನ್‌ ಪೈಲಟ್‌ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಾಂಗ್ರೆಸ್‌ ಕಿತ್ತೊಗೆದಿದೆ. ಅಲ್ಲದೆ, ಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥನ ಸ್ಥಾನದಿಂದ ವಜಾ ಮಾಡಿದ್ದು, ಆ ಸ್ಥಾನಕ್ಕೆ ಗೋವಿಂದ್‌ ಸಿಂಗ್‌ ದೊತ್ಸಾರ ಅವರನ್ನು ನೇಮಕ ಮಾಡಿರುವುದಾಗಿ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೆವಾಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.