ADVERTISEMENT

ಅಯೋಧ್ಯೆ: ಕಲ್ಲಿನಿಂದ ಹೊಡೆದು ಸಾಧು ಹತ್ಯೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 11:50 IST
Last Updated 4 ಏಪ್ರಿಲ್ 2021, 11:50 IST
ನಾಗ ಸಾಧು (ಪ್ರಾತಿನಿಧಿಕ ಚಿತ್ರ)
ನಾಗ ಸಾಧು (ಪ್ರಾತಿನಿಧಿಕ ಚಿತ್ರ)   

ಲಖನೌ: ಅಯೋಧ್ಯೆ ಪಟ್ಟಣದ ಹನುಮಾನ್‌ಗಿರಿ ದೇವಾಲಯದ ಸಾಧುವೊಬ್ಬರನ್ನು ಕಲ್ಲುಗಳಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

‘ಸಾವಿಗೀಡಾಗಿರುವ ಸಾಧುವನ್ನು ಮಹಾಂತ ಕನ್ಹಯ್ಯಾ ದಾಸ್ ಎಂದು ಗುರುತಿಸಲಾಗಿದೆ. ಇವರು ಅಯೋಧ್ಯೆಯ ಪ್ರಸಿದ್ಧ ಹನುಮಾನ್‌ಗಿರಿ ದೇವಾಲಯದಲ್ಲಿದ್ದರು. ಶನಿವಾರ ರಾತ್ರಿ ಅವರನ್ನು ಕಲ್ಲುಗಳಿಂದ ಹೊಡೆದು ಹತ್ಯೆ ಮಾಡಲಾಗಿದೆ. ಭಾನುವಾರ ಮುಂಜಾನೆ ದೇವಾಲಯದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಾಧು ಮಹಾಂತ ಅವರ ದೇಹವು ಪತ್ತೆಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಗೆ ಸಂಬಂಧಿಸಿದಂತೆ ಕನ್ಹಯ್ಯಾ ದಾಸ್ ಅವರ ‘ಗುರು ಭಾಯ್’ ಆಗಿರುವ ಗೋಲು ದಾಸ್ ಎಂಬುವರನ್ನು ಬಂಧಿಸಲಾಗಿದೆ.

ADVERTISEMENT

ಗೋಲು ದಾಸ್ ಮತ್ತು ಕನ್ಹಯ್ಯಾ ದಾಸ್ ಅವರ ನಡುವೆ ಅಯೋಧ್ಯೆಯಲ್ಲಿರುವ ಸ್ವಲ್ಪ ಜಮೀನು ಮತ್ತು ಮನೆಯೊಂದಕ್ಕೆ ಸಂಬಂಧಿಸಿದಂತೆ ವೈಷಮ್ಯವಿತ್ತು ಎಂದು ಮೂಲಗಳು ತಿಳಿಸಿವೆ.

ಕನ್ಹಯ್ಯಾ ದಾಸ್ ಅವರ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ನಾಗಾ ಸಾಧುಗಳ ದೊಡ್ಡ ಗುಂಪೊಂದು ಆಶ್ರಮಕ್ಕೆ ಭೇಟಿ ನೀಡಿತು. ‘ನಾಗಾ ಸಾಧು’ ಆಗಿದ್ದ ಕನ್ಹಯ್ಯಾ ದಾಸ್ ಅವರ ಹತ್ಯೆಯ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ನಾಗಾ ಸಾಧುಗಳ ಗುಂಪು ಒತ್ತಾಯಿಸಿದೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನಿಂದ ಹತ್ಯೆಯ ಹಿಂದಿನ ಉದ್ದೇಶವನ್ನು ತಿಳಿಯಲು ಪ್ರಯತ್ನಿಸಲಾಗುತ್ತಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.