
ಸಫ್ರಾನ್ ವಿಮಾನ ತಯಾರಿಕಾ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಚಾಲನೆ ನೀಡಿದರು. ಕೇಂದ್ರ ಸಚಿವ ರಾಮ್ ಮೋಹನ್ ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು
–ಪಿಟಿಐ ಚಿತ್ರ
ಹೈದರಾಬಾದ್: ಹೈದರಾಬಾದ್‌ನಲ್ಲಿ ನಿರ್ಮಾಣವಾಗಿರುವ ಫ್ರಾನ್ಸ್‌ನ ಸಫ್ರಾನ್ ವಿಮಾನ ತಯಾರಿಕಾ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಬುಧವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ಹೂಡಿಕೆದಾರರಿಗೆ ಭಾರತವು ನಂಬಿಕಸ್ಥ ಪಾಲುದಾರ. ಹೂಡಿಕೆದಾರರೆಂದರೆ ಸಹ ಸೃಷ್ಟಿಕರ್ತರಿದ್ದಂತೆ’ ಎಂದು ಅವರು ಬಣ್ಣಿಸಿದರು.
‘ಈ ಘಟಕವು ವಾಣಿಜ್ಯ ವಿಮಾನಗಳಲ್ಲಿ ಬಳಸುವ ಲೀಪ್ ಎಂಜಿನ್‌ಗಳನ್ನು ತಯಾರಿಸಲಿದೆ ಮತ್ತು ಯುವಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲಿದೆ’ ಎಂದು ಅವರು ಹೇಳಿದರು.
‘ದೇಶದ ನಾಗರಿಕ ವಿಮಾನಯಾನ ವಲಯವು ವೇಗಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಈ ನಿಟ್ಟಿನಲ್ಲಿ ಸಫ್ರಾನ್ ಘಟಕವು ವಿಮಾನಗಳ ಎಂಜಿನ್, ಬಿಡಿಭಾಗಗಳು ಮತ್ತು ಪ್ರೊಪಲ್ಷನ್ ವ್ಯವಸ್ಥೆಯಲ್ಲಿ ಹೊಸ ಹೊಸ ವಿನ್ಯಾಸಗಳನ್ನು ಆವಿಷ್ಕರಿಸಬೇಕು’ ಎಂದರು.
ಸಫ್ರಾನ್ ಏರ್‌ಕ್ರಾಫ್ಟ್ ಎಂಜಿನ್ ಸರ್ವೀಸಸ್ ಇಂಡಿಯಾ (ಎಸ್‌ಎಇಎಸ್‌ಐ) ಲೀಪ್ ಎಂಜಿನ್‌ಗಳ ಜಗತ್ತಿನ ಅತಿ ದೊಡ್ಡ ಎಂಆರ್‌ಒ (ಎಂಜಿನ್‌ಗಳ ನಿರ್ವಹಣೆ, ದುರಸ್ತಿ) ಘಟಕವಾಗಿದೆ. ಇದು 2026ರಿಂದ ಕಾರ್ಯಾರಂಭಿಸಲಿದ್ದು, ವಿಮಾನಯಾನ ಕ್ಷೇತ್ರದಲ್ಲಿ ದೇಶದ ಸಾಮರ್ಥ್ಯವನ್ನು ಬಲಪಡಿಸಲಿದೆ ಎಂದು ಹೇಳಲಾಗಿದೆ.
ನೂತನ ಘಟಕವು ವಾರ್ಷಿಕ ಗರಿಷ್ಠ 300 ಲೀಪ್ (ಎಲ್‌ಇಎಪಿ) ಎಂಜಿನ್‌ಗಳ ಸರ್ವೀಸ್ ಮಾಡುವಂತೆ ವಿನ್ಯಾಸಗೊಳಿಸಲಿದೆ. 1,000ಕ್ಕೂ ಹೆಚ್ಚು ತಂತ್ರಜ್ಞರು ಮತ್ತು ಎಂಜಿನಿಯರ್‌ಗಳಿಗೆ ಉದ್ಯೋಗ ನೀಡಲಿದೆ ಎಂದು ಪ್ರಧಾನ ಮಂತ್ರಿಯವರ ಕಾರ್ಯಾಲಯವು ತಿಳಿಸಿದೆ.
ಬೆಂಗಳೂರು–ಹೈದರಾಬಾದ್ ಡಿಫೆನ್ಸ್ ಕಾರಿಡಾರ್‌ಗೆ ಒತ್ತಾಯ
ಹೈದರಾಬಾದ್: ಬೆಂಗಳೂರು–ಹೈದರಾಬಾದ್ ಪ್ರದೇಶವನ್ನು ‘ಏರೋಸ್ಪೇಸ್ ಮತ್ತು ಡಿಫೆನ್ಸ್ ಕಾರಿಡಾರ್’ ಎಂದು ಘೋಷಿಸುವಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದರು.
ಸಫ್ರಾನ್ ಘಟಕಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಕಳೆದ ಕೆಲವು ವರ್ಷಗಳಲ್ಲಿ ತೆಲಂಗಾಣದ ಏರೊಸ್ಪೇಸ್ ಮತ್ತು ಡಿಫೆನ್ಸ್ ವಲಯದಿಂದ ರಫ್ತು ದ್ವಿಗುಣವಾಗಿದೆ. ಕಳೆದ 9 ತಿಂಗಳಲ್ಲಿ ಸುಮಾರು ₹30,000 ಕೋಟಿ ಔಷಧ ರಫ್ತಾಗಿದೆ’ ಎಂದು ತಿಳಿಸಿದರು.
‘ನಾಗರಿಕ ವಿಮಾನಯಾನ ಸಚಿವಾಲಯದಿಂದ ತೆಲಂಗಾಣವು ಏರೊಸ್ಪೇಸ್ ಪ್ರಶಸ್ತಿ ಪಡೆದಿದೆ. ಏರೊಸ್ಪೇಸ್ ವಲಯದಲ್ಲಿ ಹೂಡಿಕೆಗೆ ಕೌಶಲ ಅಭಿವೃದ್ಧಿ ಅಗತ್ಯ. ಹೀಗಾಗಿ ಬೆಂಗಳೂರು–ಹೈದರಾಬಾದ್ ಪ್ರದೇಶವನ್ನು ಏರೋಸ್ಪೇಸ್ ಮತ್ತು ಡಿಫೆನ್ಸ್ ಕಾರಿಡಾರ್ ಎಂದು ಘೋಷಿಸಬೇಕು’ ಎಂದು ಮನವಿ ಮಾಡಿದರು.
ತೆಲಂಗಾಣದ ಏರೊಸ್ಪೇಸ್ ಮತ್ತು ರಕ್ಷಣಾ ವಲಯದ ಬೆಳವಣಿಗೆಯಲ್ಲಿ ಸಫ್ರಾನ್ ಘಟಕವು ಮಹತ್ವ ಮೈಲುಗಲ್ಲಾಗಲಿದೆ ಎಂದು ತಿಳಿಸಿದರು.