ADVERTISEMENT

ಸೈಫ್ ‘ಸಿಂಹ’ದಂತೆ ಹೋಗಿ ‘ಹುಲಿ’ಯಂತೆ ಹೊರ ಬಂದಿದ್ದಾರೆ: ರಾಣೆಗೆ ಶೈನಾ ತಿರುಗೇಟು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜನವರಿ 2025, 9:57 IST
Last Updated 23 ಜನವರಿ 2025, 9:57 IST
<div class="paragraphs"><p>ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ, ನಟ&nbsp;ಸೈಫ್‌ ಅಲಿ ಖಾನ್ ಮತ್ತು&nbsp;ಬಿಜೆಪಿ ವಕ್ತಾರೆ ಶೈನಾ ಎನ್‌.ಸಿ</p></div>

ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ, ನಟ ಸೈಫ್‌ ಅಲಿ ಖಾನ್ ಮತ್ತು ಬಿಜೆಪಿ ವಕ್ತಾರೆ ಶೈನಾ ಎನ್‌.ಸಿ

   

–ಪಿಟಿಐ ಚಿತ್ರಗಳು

ಮುಂಬೈ: ಚಾಕು ಇರಿತದಿಂದ ಚೇತರಿಸಿಕೊಂಡು ಐದು ದಿನಗಳ ಬಳಿಕ ಆಸ್ಪತ್ರೆಯಿಂದ ಮನೆಗೆ ವಾಪಾಸ್ಸಾಗಿರುವ ಬಾಲಿವುಡ್ ನಟ ಸೈಫ್‌ ಅಲಿ ಖಾನ್ ಅವರನ್ನು ‘ಕಸ’ಕ್ಕೆ ಹೋಲಿಕೆ ಮಾಡಿದ್ದ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆಗೆ ಬಿಜೆಪಿ ವಕ್ತಾರೆ ಶೈನಾ ಎನ್‌.ಸಿ ತಿರುಗೇಟು ನೀಡಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಚಾಕು ಇರಿತಕ್ಕೊಳಗಾಗಿದ್ದ ಸೈಫ್ ಅವರು ಆಸ್ಪತ್ರೆಯೊಳಗೆ ‘ಸಿಂಹ’ದಂತೆ ಹೋಗಿ ‘ಹುಲಿ’ಯಂತೆ ಹೊರ ಬಂದಿದ್ದಾರೆ. ದುಷ್ಕರ್ಮಿಯೊಂದಿಗೆ ಹೋರಾಟ ನಡೆಸಿದ ಅವರ (ಸೈಫ್) ಧೈರ್ಯವನ್ನು ಮೆಚ್ಚಲೇಬೇಕು’ ಎಂದು ಹೇಳಿದ್ದಾರೆ.

‘ಸುರಕ್ಷತಾ ಕ್ರಮಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಅನಗತ್ಯ ವಿಚಾರಗಳ ಬಗ್ಗೆ ಚರ್ಚೆ ಬೇಡ’ ಎಂದು ಶೈನಾ ರಾಜಕೀಯ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

‘ಬಹುಶಃ ಚಾಕು ಇರಿದ ಆರೋಪಿ, ಸೈಫ್ ಅವರನ್ನು ಕರೆದುಕೊಂಡು ಹೋಗಲು ಬಂದಿರಬಹುದು. ಇದು ಒಳ್ಳೆಯದೇ.. ಕಸವನ್ನು ಎಸೆಯಬೇಕು’ ಎಂದು ರಾಣೆ ಹೇಳಿದ್ದರು. ಈ ಕುರಿತ ವಿಡಿಯೊವನ್ನು ಸುದ್ದಿಸಂಸ್ಥೆ ಎಎನ್‌ಐ ಹಂಚಿಕೊಂಡಿದೆ.

‘ಮುಂಬೈನಲ್ಲಿ ಬಾಂಗ್ಲಾದೇಶಿಗಳು ಏನು ಮಾಡುತ್ತಿದ್ದಾರೆ ನೋಡಿ. ಅವರು ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ್ದಾರೆ. ಮೊದಲು ರಸ್ತೆಯ ಕ್ರಾಸಿಂಗ್‌ಗಳಲ್ಲಿ ನಿಲ್ಲುತ್ತಿದ್ದ ಅವರು ಈಗ ಮನೆಗಳಿಗೆ ಪ್ರವೇಶಿಸಲು ಪ್ರಾರಂಭಿಸಿದ್ದಾರೆ’ ಎಂದು ರಾಣೆ ಹೇಳಿದ್ದರು.

‘ಸೈಫ್‌ ಅವರು ಆಸ್ಪತ್ರೆಯಿಂದ ಹೊರಗೆ ಬರುವುದನ್ನು ನೋಡಿದರೆ ಅವರಿಗೆ ನಿಜವಾಗಿಯೂ ಚಾಕುವಿನಿಂದ ಗಾಯವಾಗಿದೆಯಾ? ಅಥವಾ ನಟಿಸುತ್ತಿದ್ದಾರಾ? ಎಂಬ ಅನುಮಾನ ಬಂತು. ನಡೆಯುವಾಗ ಅವರು ನೃತ್ಯ ಮಾಡುತ್ತಿದ್ದರು’ ಎಂದು ರಾಣೆ ಅನುಮಾನ ವ್ಯಕ್ತಪಡಿಸಿದ್ದರು.

ಜ.16ರಂದು ಮುಂಬೈನ ಬಾಂದ್ರಾದಲ್ಲಿರುವ ‘ಸದ್ಗುರು ಶರಣ್’ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಲ್ಲಿರುವ ನಿವಾಸದಲ್ಲಿ 54 ವರ್ಷದ ಸೈಫ್ ಅಲಿ ಖಾನ್ ದುಷ್ಕರ್ಮಿಯೊಬ್ಬರಿಂದ ಚಾಕು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ಸೈಫ್‌ ಅವರ ಬೆನ್ನೆಲುಬಿಗೆ ಗಂಭೀರ ಗಾಯವಾಗಿದ್ದು, ಅಲ್ಲಿ ಹೊಕ್ಕಿದ್ದ ಚಾಕು ಹೊರತೆಗೆಯಲು ಮತ್ತು ಬೆನ್ನುಮೂಳೆಯ ಮಜ್ಜೆಯನ್ನು ಸರಿಪಡಿಸಲು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು. ಇದೀಗ ಸೈಫ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಾಂಗ್ಲಾ ಮೂಲದ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಸೈಫ್ ಅವರ ನಿವಾಸಕ್ಕೆ ಶೆಹಜಾದ್ ಕಳ್ಳತನದ ಉದ್ದೇಶದಿಂದ ಪ್ರವೇಶಿಸಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.