ಭಾರತೀಯ ಉಕ್ಕು ಪ್ರಾಧಿಕಾರ
ರಾಯಿಟರ್ಸ್ ಚಿತ್ರ
ನವದೆಹಲಿ: ಭಾರತೀಯ ಉಕ್ಕು ಪ್ರಾಧಿಕಾರ (SAIL) ಆಯೋಜಿಸಿದ್ದ ಸಣ್ಣ ಕಥೆಗಳ ಸ್ಪರ್ಧೆಯಲ್ಲಿ ಮೊದಲ ಹತ್ತು ಬಹುಮಾನಿತರಲ್ಲಿ ಎಂಟು ಜನ ಮಹಿಳೆಯರೇ ಇದ್ದು, ಬೆಂಗಳೂರಿನ ಚಂಚಲಾ ಬೋರಾ ಮತ್ತು ಉತ್ತರ ಪ್ರದೇಶದ ಕೀರ್ತಿ ಸಿಂಗ್ ವಿಜೇತರಾಗಿದ್ದಾರೆ.
‘ಸೈಲ್: ಪ್ರತಿ ನಗುವೂ ಪ್ರಮುಖವಾದ ಸಂತೋಷದ ಸಂಸ್ಕೃತಿಯನ್ನು ನಿರ್ಮಿಸುತ್ತದೆ’ ಎಂಬ ವಿಷಯ ಕುರಿತು ಸಣ್ಣ ಕಥೆಯನ್ನು ಬರೆಯುವ ಈ ಸ್ಪರ್ಧೆಯಲ್ಲಿ ಪ್ರವಿಂತಾ ಕುಮಾರಿ ಲಾಮಾ, ನಿತು ಕುಮಾರಿ, ಟಿ. ಅವಿನಾಶ್, ಪ್ರಿಯಾ ಮಂಡಲ್, ಹೇಮಾ ಕುಮಾರಿ ಥಾಯಲ್ ಮತ್ತು ಸ್ನೇಹಲ್ ಪವಾರ್ ಸೇರಿದ್ದಾರೆ.
ಈ ಸ್ಪರ್ಧೆಗೆ ದೇಶದಾದ್ಯಂತ ಒಂದು ಸಾವಿರ ಕಥೆಗಳು ಸಲ್ಲಿಕೆಯಾಗಿದ್ದವು. ಅಂತಿಮ ಹತ್ತು ವಿಜೇತರಲ್ಲಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ತಲಾ ಐವರು ವಿಜೇತರು ಆಯ್ಕೆಯಾಗಿದ್ದಾರೆ. ವಜ್ರ, ಬಂಗಾರ, ಬೆಳ್ಳಿ, ಕಂಚು ಮತ್ತು ಸಮಾಧಾನಕರ ಎಂದು ಬಹುಮಾನವನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ. ತಲಾ ₹10 ಸಾವಿರ ನಗದು ಮತ್ತು ಪ್ರಮಾಣಪತ್ರ ಒಳಗೊಂಡಿದೆ.
‘ದೇಶದ ನಾನಾ ಭಾಗಗಳಿಂದ ಸಾಕಷ್ಟು ಕಥೆಗಳು ಸ್ಪರ್ಧೆಗೆ ಬಂದಿದ್ದವು. ಇವುಗಳಲ್ಲಿ ವಿಜೇತರಾದವರಲ್ಲಿ ಶೇ 80ರಷ್ಟು ಮಹಿಳೆಯರೇ ಇರುವುದು ಸ್ಫೂರ್ತಿಯ ವಿಷಯ. ದೇಶದ ನಾನಾ ಭಾಗಗಳಿಂದ ಸಲ್ಲಿಕೆಯಾದ ಕಥೆಗಳಲ್ಲಿ ದೇಶದ ಬೆಳವಣಿಗೆಯಲ್ಲಿ ಕಂಪನಿಯಾಗಿ ಹೇಗೆ ಸೈಲ್ ತನ್ನನ್ನು ಸಮರ್ಪಿಸಿದೆ. ಆ ಮೂಲಕ ಜನರು ತಮ್ಮ ಬದುಕನ್ನು ಹಸನಾಗಿಸಿದ್ದಾರೆ ಎಂಬುದನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
‘ಜನರ ಬದುಕಿನಲ್ಲಿ ಸೈಲ್ ಹೇಗೆ ಸಂಸ್ಕೃತಿಯನ್ನು ತುಂಬಿದ ಸಂತೋಷವನ್ನು ಹರಡಿದೆ ಎಂದು ಪ್ರತಿ ಕಥೆಯೂ ಸಾರಿದೆ. ದೇಶದ ಅಭಿವೃದ್ಧಿಯಲ್ಲಿ ಉಕ್ಕು ಹೇಗೆ ಸಕಾರಾತ್ಮಕ ಪರಿಣಾಮಗಳನ್ನು ಬೀರಿದೆ ಎಂಬುದನ್ನು ತೋರಿಸಲಾಗಿದೆ’ ಎಂದು ಸೈಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಮರೇಂದು ಪ್ರಕಾಶ್ ಅವರು ಹೇಳಿದ್ದಾರೆ.
ಕಳೆದ ಫೆಬ್ರುವರಿಯಲ್ಲಿ ಸ್ಪರ್ಧೆಗೆ ಕಥೆಗಳನ್ನು ಆಹ್ವಾನಿಸಲಾಗಿತ್ತು. 800 ಪದಗಳ ಕಥೆಯೊಂದನ್ನು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಬರೆಯಬೇಕಿತ್ತು. ಭಾರತೀಯ ನಾಗರಿಕರು ಹಾಗೂ ಸೈಲ್‌ನ ಹಾಲಿ ಮತ್ತು ನಿವೃತ್ತ ನೌಕರರು ಪಾಲ್ಗೊಳ್ಳಲು ಅವಕಾಶವಿತ್ತು. ವಿಜೇತ ಕಥೆಗಳು ಸಂಸ್ಥೆಯ ಆಂತರಿಕ ನಿಯತಕಾಲಿಕೆಯಲ್ಲಿ ಪ್ರಕಟಗೊಳ್ಳಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.