ADVERTISEMENT

ಸಿಖ್‌ ನರಮೇಧದ ಕುರಿತ ಪಿತ್ರೋಡ ಮಾತು ತಪ್ಪು: ರಾಹುಲ್‌ ಗಾಂಧಿ 

ಏಜೆನ್ಸೀಸ್
Published 11 ಮೇ 2019, 13:34 IST
Last Updated 11 ಮೇ 2019, 13:34 IST
   

ಶುಜಾಲ್‌ಪುರ(ಮಧ್ಯಪ್ರದೇಶ): ಸಿಖ್‌ ನರಮೇಧದ ಕುರಿತು ಸ್ಯಾಮ್‌ ಪಿತ್ರೋಡ ಅವರ ಮಾತು ತಪ್ಪು ಎಂದು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದ್ದಾರೆ.

ಸಾಗರೋತ್ತರ ಕಾಂಗ್ರೆಸ್‌ ಘಟಕದಅಧ್ಯಕ್ಷ ಸ್ಯಾಮ್‌ ಪಿತ್ರೋಡ ಅವರು ಶುಕ್ರವಾರರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್‌ಐನೊಂದಿಗೆ ಮಾತನಾಡುವ ವೇಳೆ ಸಿಖ್‌ ನರಮೇಧದ ಕುರಿತು ಕೇಳಿದ ಪ್ರಶ್ನೆಗೆ, ‘ಆದದ್ದು ಆಗಿ ಹೋಯಿತು. ಅದಕ್ಕೇನು? ಅದು ಚರ್ಚೆಗೆ ಯೋಗ್ಯವಾದ ವಿಷಯವಲ್ಲ,’ ಎಂದು ಹೇಳಿದ್ದರು. ಈ ವಿಷಯದಿಂದ ಕಾಂಗ್ರೆಸ್‌ ಅಂತರ ಕಾದುಕೊಂಡಿತ್ತು.

ಹೀಗಿರುವಾಗಲೇಮಧ್ಯಪ್ರದೇಶದ ಶುಜಾಲ್‌ಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಹುಲ್‌ ಗಾಂಧಿ, ‘ಸಿಖ್‌ ನರಮೇಧದ ಕುರಿತು ಸ್ಯಾಮ್‌ ಪಿತ್ರೋಡ ಅವರು ನೀಡಿರುವ ಹೇಳಿಕೆ ತಪ್ಪು. ಇಂಥ ಮಾತುಗಳನ್ನಾಡದಂತೆ ನಾನು ಅವರಿಗೆ ತಾಕೀತು ಮಾಡಿದ್ದೇನೆ. 1984ರ ಸಿಖ್‌ ನರಮೇಧದ ಕುರಿತು ಚರ್ಚೆ ಮಾಡುವ ಪ್ರಶ್ನೆಯೇ ಇಲ್ಲ. ಅಂದು ಯಾರೆಲ್ಲ ಹಿಂಸಾಚಾರದಲ್ಲಿ ತೊಡಗಿದ್ದರೋ ಅವರಿಗೆಲ್ಲ ನೂರಕ್ಕೆ ನೂರು ಶಿಕ್ಷೆಯಾಗಲೇಬೇಕು,’ ಎಂದು ಅವರು ಪ್ರತಿಪಾದಿಸಿದ್ದಾರೆ.

ADVERTISEMENT

‘ಆಗಿದ್ದು ಆಯಿತು. ಏನೀಗ?’ ಎಂಬ ಪಿತ್ರೋಡ ಮಾತಿಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿತ್ತು. ಈ ಬಗ್ಗೆ ಮಾತನಾಡಿದ್ದ ನರೇಂದ್ರ ಮೋದಿ ‘ಪಿತ್ರೋಡ ಅವರ ಮಾತು ಅವರ ಮನಸ್ಥಿತಿಯನ್ನು ಬಯಲು ಮಾಡಿದೆ,’ ಎಂದಿದ್ದರು.

ಈಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದು ತಿಳಿಯುತ್ತಲೇ ಕ್ಷಮೆ ಕೋರಿದ್ದ ಸ್ಯಾಮ್‌ ಪಿತ್ರೋಡ ಅವರು, ‘ದೇಶದಲ್ಲಿ ಚರ್ಚೆ ಮಾಡಲು ಹಲವು ವಿಷಯಗಳಿವೆ. ಆದ್ದರಿಂದ ಹಿಂದಿನದ್ದನ್ನು ಬಿಟ್ಟು ಮುಂದಿನದ್ದನ್ನು ಯೋಚಿಸಬೇಕು ಎಂಬುದಷ್ಟೇ ನನ್ನ ಮಾತಿನ ಉದ್ದೇಶವಾಗಿತ್ತು,’ ಎಂದು ಹೇಳಿದ್ದರು.

ಪಿತ್ರೋಡ ಹೇಳಿಕೆ ಕುರಿತು ಶನಿವಾರ ಬೆಳಗ್ಗೆ ಫೇಸ್‌ಬುಕ್‌ನಲ್ಲೂ ಬರೆದುಕೊಂಡಿರುವ ರಾಹುಲ್‌ ಗಾಂಧಿ, ‘ಪಿತ್ರೋಡ ಮಾತು ಸಂಪೂರ್ಣ ಅಪ್ರಸ್ತುತ. ಅವರು ಕ್ಷಮೆ ಕೋರಬೇಕು,’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.