ಸಂಭಲ್ ಶಾಹಿ ಜಮಾ ಮಸೀದಿ
– ಪಿಟಿಐ ಚಿತ್ರ
ಸಂಭಲ್: ಸಂಭಲ್ ಜಮಾ ಮಸೀದಿ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್‌ನಿಂದ ತಡೆ ಇರುವುದರಿಂದ ಸ್ಥಳೀಯ ನ್ಯಾಯಾಲಯವೊಂದು ಡಿ. 3ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಮಸೀದಿಯ ಮಾಲೀಕತ್ವಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಮಸೀದಿ ಆವರಣದ ಸಮೀಕ್ಷೆಗೆ ಅನುಮತಿ ವಿಚಾರಣಾ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಮುಸ್ಲಿಮರು ಈ ಹಿಂದೆ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮೇ 19 ರಂದು, ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್, ಪ್ರಕರಣದ ವಿಚಾರಣೆಯನ್ನು ಮುಂದುವರಿಸಲು ಕೆಳ ನ್ಯಾಯಾಲಯಕ್ಕೆ ಸೂಚಿಸಿತ್ತು.
‘ಪ್ರಕರಣದ ವಿಚಾರಣೆಯನ್ನು ನವೆಂಬರ್ 7ಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಬಾಕಿ ಇರುವುದರಿಂದ, ಮುಂದಿನ ವಿಚಾರಣೆಯನ್ನು ವಿಚಾರಣಾ ನ್ಯಾಯಾಲಯವು ಡಿಸೆಂಬರ್ 3 ಕ್ಕೆ ನಿಗದಿಪಡಿಸಿದೆ’ ಎಂದು ಮಸೀದಿ ಪರ ವಕೀಲ ಶಕೀಲ್ ಅಹ್ಮದ್ ವಾರ್ಸಿ ತಿಳಿಸಿದ್ದಾರೆ.
ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ವಿಚಾರಣೆಯನ್ನು ಮುಂದೂಡಲು ವಿಚಾರಣಾ ನ್ಯಾಯಾಲಯ ನಿರ್ಧರಿಸಿದೆ ಎಂದು ಹಿಂದೂ ಕಡೆಯವರನ್ನು ಪ್ರತಿನಿಧಿಸುವ ವಕೀಲ ಗೋಪಾಲ್ ಶರ್ಮಾ ಹೇಳಿದ್ದಾರೆ.
ಕಳೆದ ವರ್ಷ ನವೆಂಬರ್ 19 ರಂದು, ಶಾಹಿ ಜಾಮಾ ಮಸೀದಿ ಆವರಣವು ಹರಿಹರ ದೇವಸ್ಥಾನದ ಸ್ಥಳವಾಗಿದೆ ಎಂದು ಪ್ರತಿಪಾದಿಸಿ ಹಿಂದೂ ಪರ ವಕೀಲರಾದ ಹರಿಶಂಕರ್ ಜೈನ್ ಮತ್ತು ವಿಷ್ಣು ಶಂಕರ್ ಜೈನ್ ಮತ್ತು ಇತರರು ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
2024ರ ನವೆಂಬರ್‌ನಲ್ಲಿ ಮಸೀದಿಯ ಸಮೀಕ್ಷೆಗೆ ಕೋರ್ಟ್ ಅನುಮತಿ ನೀಡಿತ್ತು. ನವೆಂಬರ್ 24 ರಂದು ಸಮೀಕ್ಷೆ ನಡೆಯುವ ವೇಳೆ, ಸಂಭಲ್‌ನಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಿಂದ ನಾಲ್ವರು ಸಾವಿಗೀಡಾದರು. 29 ಪೊಲೀಸರು ಗಾಯಗೊಂಡಿದ್ದರು.
ಸಮಾಜವಾದಿ ಪಕ್ಷದ ಸಂಸದ ಜಿಯಾವುರ್ ರೆಹಮಾನ್ ಬಾರ್ಕ್, ಮಸೀದಿ ಸಮಿತಿ ಅಧ್ಯಕ್ಷ ಜಾಫರ್ ಅಲಿ ಮತ್ತು 2,750 ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.