ADVERTISEMENT

ಮಾನಹಾನಿ: ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ತಡೆ ನೀಡಲು ಕೋರ್ಟ್‌ಗೆ‌ ವಾಂಖೆಡೆ ಮನವಿ

ಪಿಟಿಐ
Published 10 ಡಿಸೆಂಬರ್ 2021, 10:29 IST
Last Updated 10 ಡಿಸೆಂಬರ್ 2021, 10:29 IST
ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ
ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ    

ಮುಂಬೈ: ತಮ್ಮ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ರೀತಿಯ ಮಾನಹಾನಿ ಮತ್ತು ದುರುದ್ದೇಶಪೂರಿತ ಬರಹಗಳನ್ನು ಪೋಸ್ಟ್ ಮಾಡುವುದಕ್ಕೆ ತಡೆ ನೀಡಬೇಕು ಎಂದು ಕೋರಿ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಅವರ ಪತ್ನಿ ಮುಂಬೈ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಬೋರಿವಲಿ ಉಪನಗರದಲ್ಲಿನ ಸಿವಿಲ್ ಕೋರ್ಟ್‌ಗೆ ಕಳೆದ ತಿಂಗಳು ಅರ್ಜಿ ಸಲ್ಲಿಸಿದ್ದ ವಾಂಖೆಡೆ ಮತ್ತು ಅವರ ಪತ್ನಿ, ನಟಿ ಕ್ರಾಂತಿ ರೇಡ್ಕರ್, ಗೂಗಲ್, ಫೇಸ್‌ಬುಕ್ ಮತ್ತು ಟ್ವಿಟರ್ ತನ್ನ ವೇದಿಕೆಗಳಲ್ಲಿ ಯಾವುದೇ ರೀತಿಯ ಮಾನಹಾನಿಯಾಗುವಂತಹ ಪೋಸ್ಟ್‌ಗಳನ್ನು ಪ್ರಕಟಿಸದಿರಲು ಖಾಯಂ ತಡೆ ನೀಡುವಂತೆ ಕೋರಿದ್ದರು.

ಎನ್‌ಸಿಬಿ ಅಧಿಕಾರಿ ಯಾರ ವಿರುದ್ಧ ಕ್ರಮಕೈಗೊಂಡಿದ್ದಾರೆಯೋ ಅಂತ ವ್ಯಕ್ತಿಗಳ ಅಣತಿಯ ಮೇರೆಗೆ ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ 'ಪ್ರಾಯೋಜಿತ ತಪ್ಪು ಮಾಹಿತಿ'ಯನ್ನು ಹಲವು ಕೆಟ್ಟ ಶಕ್ತಿಗಳ ಮೂಲಕ ಹರಡಲಾಗುತ್ತಿದೆ. ಇದರಿಂದ 'ತಪ್ಪು ಮಾಹಿತಿ ಅಭಿಯಾನ'ವು ಪಟ್ಟಭದ್ರ ಹಿತಾಸಕ್ತಿಗಳ ಪ್ರಭಾವದಿಂದಾಗಿದೆ ಎಂಬುದು ಸ್ಪಷ್ಟವಾಗಿದೆ. ಇದು ಎನ್‌ಸಿಬಿ ಅಧಿಕಾರಿ ನಡೆಸಿದ ತನಿಖೆಗಳಿಂದ ಪ್ರಭಾವಿತಗೊಂಡ ಕೃತ್ಯವಾಗಿದೆ ಎಂದು ಕಾನೂನು ಸಂಸ್ಥೆ ರೆಕ್ಸ್ ಲೀಗಲಿಸ್ ಮನವಿಯಲ್ಲಿ ತಿಳಿಸಿದೆ.

ADVERTISEMENT

ಈ ರೀತಿಯಲ್ಲಿ ಚಾರಿತ್ರ್ಯ ಹರಣ ಮಾಡುವುದರಿಂದ ವಾಂಖೆಡೆ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂಬುದನ್ನು ಅರಿತ ಕೆಟ್ಟ ಶಕ್ತಿಗಳು ಈಗ ಅವರ ಪತ್ನಿಯ ಮೇಲೆ ವೈಯಕ್ತಿಕ ದಾಳಿಗೆ ಇಳಿದಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಈ ಸಂಬಂಧ ನ್ಯಾಯಾಲಯ ಡಿಸೆಂಬರ್ 17 ರಂದು ವಿಚಾರಣೆಗೆ ಅರ್ಜಿಯನ್ನು ಕೈಗೆತ್ತಿಕೊಳ್ಳಲಿದೆ. ಆರ್ಯನ್ ಖಾನ್ ಆರೋಪಿಯಾಗಿರುವ ಡ್ರಗ್ಸ್ ಪ್ರಕರಣ ಮತ್ತು ಇತರೆ ಪ್ರಕರಣಗಳಲ್ಲಿ ಸಮೀರ್ ವಾಂಖೆಡೆ ವಿರುದ್ಧ ಸುಲಿಗೆ ಮತ್ತು ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.