ಸಂಜಯ್ ಗಾಂಧಿ, ಶಶಿ ತರೂರ್
ತಿರುವನಂತಪುರ: ‘1975ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿಯು ಕರಾಳ ಅಧ್ಯಾಯವಾಗಿದೆ. ಮಿತಿಮೀರಿದ ಅಧಿಕಾರದಾಹವನ್ನು ಜನರು ಸ್ಪಷ್ಟವಾಗಿ ತಿರಸ್ಕರಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ದೊಡ್ಡ ಅಂತರದಲ್ಲಿ ಮಣಿಸಿದ್ದರು’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ಸಂಸದ ಶಶಿ ತರೂರ್ ಅವರು ಟೀಕಿಸಿದ್ದಾರೆ.
1975ರ ಜೂನ್ 25 ಹಾಗೂ ಮಾರ್ಚ್ 21ರ 1977ರ ಅವಧಿ ಕುರಿತಂತೆ ಮಲಯಾಳಿ ದಿನಪತ್ರಿಕೆ ‘ದೀಪಿಕಾ’ಕ್ಕೆ ಲೇಖನ ಬರೆದಿರುವ ಅವರು, ‘ತುರ್ತು ಪರಿಸ್ಥಿತಿ ಕಾಲಘಟ್ಟವು ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯವಾಗಿದೆ’ ಎಂದು ಟೀಕಿಸಿದ್ದಾರೆ.
ಇಂದಿರಾ ಗಾಂಧಿ ಅವರ ಮಗ ಸಂಜಯ್ ಗಾಂಧಿ ಅವರು ನಡೆಸಿದ ಸಂತಾನಶಕ್ತಿ ಹರಣ ಕಾರ್ಯಾಚರಣೆ, ದೆಹಲಿಯ ಕೊಳೆಗೇರಿ ನಾಶಗೊಳಿಸಿದ ಕುಖ್ಯಾತ ಕೃತ್ಯಗಳನ್ನು ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ.
ಮಗನ ಕೆಲಸದ ಬಗ್ಗೆ ಇಂದಿರಾ ಗಾಂಧಿ ಅವರಿಗೆ ಮಾಹಿತಿಯಿದ್ದರೂ ಕೂಡ ಅದನ್ನು ಅನುಮೋದಿಸಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಶಿಸ್ತಿನ ಹೆಸರಿನಲ್ಲಿ ತೆಗೆದುಕೊಂಡ ಕ್ರಮಗಳು ಕ್ರೌರ್ಯದ ಕೃತ್ಯಗಳಾಗಿ ಮಾರ್ಪಟ್ಟಿದ್ದು, ಅವುಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಸಂಜಯ್ ಗಾಂಧಿ ಅವರು ಸಂತಾನಹರಣ ಶಕ್ತಿ ಹರಣ ಕಾರ್ಯಾಚರಣೆ ಬಲವಂತವಾಗಿ ಕೈಗೊಂಡಿದ್ದು ಇದಕ್ಕೆ ಉದಾಹರಣೆ. ಗ್ರಾಮೀಣ ಭಾಗದಲ್ಲಿ ಹಿಂಸಾಚಾರಗಳನ್ನು ಅನಿಯಂತ್ರಿತವಾಗಿ ಮುಂದುವರಿಸಲಾಗಿತ್ತು. ನವದೆಹಲಿಯಲ್ಲಿ ಹಲವು ಕೊಳೆಗೇರಿಗಳನ್ನು ಅಮಾನುಷವಾಗಿ ನಾಶಗೊಳಿಸಿ, ಅವುಗಳನ್ನು ತೆರವುಗೊಳಿಸಲಾಗಿತ್ತು. ಸಾವಿರಾರು ಜನರು ಮನೆ ಕಳೆದುಕೊಂಡಿದ್ದರು. ಅವರ ಶ್ರೇಯೋಭಿವೃದ್ಧಿಯನ್ನು ಪರಿಗಣಿಸಿಯೇ ಇರಲಿಲ್ಲ’ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿ ಹಾಗೂ ಸ್ಥಿರತೆಯ ಹೆಸರಿನಲ್ಲಿ ತುರ್ತುಪರಿಸ್ಥಿತಿಯನ್ನು ಸಮರ್ಥಿಸಿಕೊಳ್ಳುವ ಪರಿಪಾಠವನ್ನು ನೋಡುತ್ತೇವೆ. ಪ್ರಜಾಪ್ರಭುತ್ವದ ರಕ್ಷಕರು ಯಾವಾಗಲೂ ಜಾಗರೂಕರಾಗಿರಬೇರು ಎಂಬ ಬಲವಾದ ಎಚ್ಚರಿಕೆ ಸಂದೇಶವನ್ನು ನೀಡಿದೆ.– ಶಶಿ ತರೂರ್, ಸಂಸದ
‘ಇಷ್ಟಾದರೂ, ಮಿತಿಮೀರಿದ ಅಧಿಕಾರದಾಹದಿಂದ ನಡೆಸಿದ ಈ ಎಲ್ಲ ಕ್ರಮಗಳನ್ನು ನಂತರ ಘನತೆ ಹೆಚ್ಚಿಸಲು ತೆಗೆದುಕೊಂಡ ಕ್ರಮಗಳು ಎಂದೇ ಬಿಂಬಿಸಲಾಯಿತು. ಭಿನ್ನಾಭಿಪ್ರಾಯವನ್ನು ಮೌನವಾಗಿರಿಸಿ, ಮೂಲಭೂತ ಹಕ್ಕುಗಳನ್ನು ಕಡಿತಗೊಳಿಸಿ, ಸ್ವಾತಂತ್ರ್ಯವಾಗಿ ಬರೆಯುವ, ಮಾತನಾಡುವ ಅಧಿಕಾರ ಕಿತ್ತುಕೊಂಡ ಕ್ರಮಗಳನ್ನು ಸಾಂವಿಧಾನಿಕ ಕಾನೂನಿನಡಿಯಲ್ಲಿ ಸ್ಪಷ್ಟವಾಗಿ ನಿರ್ಲಕ್ಷಿಸಲಾಗಿತ್ತು. ಈ ಅಸಮಾನತೆಯನ್ನು ನ್ಯಾಯಾಂಗವು ನಿಧಾನವಾಗಿ ಮತ್ತೆ ಪುನರ್ ಸ್ಥಾಪಿಸಿದರೂ ಕೂಡ ಆರಂಭಿಕ ಹಂತದ ಹಿನ್ನಡೆಯನ್ನು ಮರೆಯಲು ಸಾಧ್ಯವಿಲ್ಲ’ ಎಂದು ತರೂರ್ ಪ್ರಶ್ನಿಸಿದ್ದಾರೆ.
ತರೂರ್ ಲೇಖನದ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ವಿ.ಡಿ.ಸತೀಶನ್, ‘ಶಶಿ ತರೂರ್ ಅವರು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ. ಅವರು ಬರೆದ ಲೇಖನದ ಕುರಿತಂತೆ ಪಕ್ಷದ ರಾಷ್ಟ್ರೀಯ ನಾಯಕರು ಪ್ರತಿಕ್ರಿಯೆ ನೀಡಲಿದ್ದಾರೆ’ ಎಂದು ತಿಳಿಸಿದರು.
‘ಲೇಖನದ ಬಗ್ಗೆ ನನಗೆ ಒಂದು ಅಭಿಪ್ರಾಯವಿದೆ, ಆದರೆ ಅದನ್ನು ವ್ಯಕ್ತಪಡಿಸುವುದಿಲ್ಲ’ ಎಂದರು.
‘ಈಗಿನ ಕಾಲಘಟ್ಟದಲ್ಲಿ ತುರ್ತುಪರಿಸ್ಥಿತಿ ಎಂಬುದು ಪ್ರಸ್ತುತ ವಿಚಾರವಲ್ಲ’ ಎಂದು ಹಿರಿಯ ಕಾಂಗ್ರೆಸ್ ನಾಯಕ ಕೆ.ಮುರುಳೀಧರನ್ ತಿಳಿಸಿದರು.
ತರೂರ್ ಅವರು ಕಾಂಗ್ರೆಸ್ ನಾಯಕರಾಗಿ ಇಂದಿರಾಗಾಂಧಿ ಸಂಜಯ್ ಗಾಂಧಿ ವಿರುದ್ಧ ಇಂತಹ ಪದಗಳನ್ನು ಬಳಸುತ್ತಾರೆ ಎಂದು ನಾನು ಯೋಚಿಸಿರಲಿಲ್ಲ.– ರಮೇಶ್ ಚೆನ್ನಿತ್ತಲ, ಸಿಡಬ್ಲ್ಯೂಸಿ ಸದಸ್ಯ
ಸಹೋದ್ಯೋಗಿಯೊಬ್ಬರು ಬಿಜೆಪಿಯ ಸಾಲುಗಳನ್ನು ಪದಶಃ ಪುನಾರವರ್ತಿಸುವುದು ನೋಡಿದರೆ ನೀವು ಆಶ್ಚರ್ಯಪಡುತ್ತೀರಿ? ಹಕ್ಕಿಯು ಗುಬ್ಬಚ್ಚಿಯಾಗಲು ಸಾಧ್ಯವೇ? ಹಕ್ಕಿಗಳ ಧ್ವನಿಯು ಮಧುರವಾಗಿರುತ್ತದೆ ರಾಜಕೀಯದಲ್ಲಲ್ಲ.– ಮಾಣಿಕ್ಯಂ ಠಾಗೋರ್, ಕಾಂಗ್ರೆಸ್ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.