ನವದೆಹಲಿ: ದೂರದರ್ಶನದ ಹಿರಿಯ ಸುದ್ದಿ ವಾಚಕಿ ಸರಳಾ ಮಹೇಶ್ವರಿ ಅವರು ಇಂದು ದೆಹಲಿಯಲ್ಲಿ ನಿಧನರಾದರು. ಅವರಿಗೆ 71 ವರ್ಷವಾಗಿತ್ತು.
ಸರಳಾ ಅವರ ನಿಧನಕ್ಕೆ ಸಂತಾಪ ಸೂಚಿಸಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ದೂರದರ್ಶನ ನ್ಯಾಷನಲ್, ಸರಳಾ ಅವರ ವ್ಯಕ್ತಿತ್ವ, ನಿರೂಪಣಾ ಶೈಲಿಯನ್ನು ಸ್ಮರಿಸಿದೆ.
‘ದೂರದರ್ಶನ ಕುಟುಂಬದಿಂದ ಸರಳಾ ಮಹೇಶ್ವರಿಗೆ ಅವರಿಗೆ ಗೌರವ ನಮನಗಳು. ದೂರದರ್ಶನದ ಗೌರವಾನ್ವಿತ ಸುದ್ದಿ ವಾಚಕಿಯಾಗಿದ್ದ ಅವರು, ತಮ್ಮ ಸೌಮ್ಯ ಧ್ವನಿ, ಸ್ಪಷ್ಟ ಉಚ್ಛಾರಣೆ ಮತ್ತು ವಿಶಿಷ್ಟ ಪ್ರಸ್ತುತಿಯ ಮೂಲಕ ಭಾರತೀಯ ಸುದ್ದಿ ಜಗತ್ತಿನಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದರು’ ಎಂದು ಹೇಳಿದೆ.
ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರು ಸರಳಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ‘ಟಿವಿಯಲ್ಲಿ ಕಿರುಚಾಡಬೇಕಿಲ್ಲದ ದಿನಗಳವು. ಸರಳಾ ಮಹೇಶ್ವರಿ ದೂರದರ್ಶನದಲ್ಲಿ ಸದಾ ಚಿರಸ್ಥಾಯಿಯಾಗಿದ್ದ ಸುದ್ದಿ ವಾಚಕಿ. ಅವರ ಧ್ವನಿ ಯಾವಾಗಲೂ ಸೌಮ್ಯವಾಗಿತ್ತು’ ಎಂದು ಹೇಳಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪಡೆಯುತ್ತಿದ್ದ ಸಮಯದಲ್ಲಿ 1976ರಲ್ಲಿ ದೂರದರ್ಶನದಲ್ಲಿ ಸುದ್ದಿ ಉದ್ಘೋಷಕಿಯಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದ ಸರಳಾ ಅವರು ನಂತರ ಸುದ್ದಿ ವಾಚಕಿಯಾಗಿ ಬಡ್ತಿ ಪಡೆದಿದ್ದರು. 1984ರಲ್ಲಿ ದೂರದರ್ಶನವನ್ನು ತೊರೆದು ಬ್ರಿಟನ್‌ಗೆ ತೆರಳಿದ್ದರು. ಅಲ್ಲಿ ಅವರು 1986ರಲ್ಲಿ ಬಿಬಿಸಿಯಲ್ಲಿ ಸುದ್ದಿ ವಾಚಕಿಯಾಗಿ ಕೆಲಸ ಮಾಡಿದ್ದರು.1988ರಲ್ಲಿ ಭಾರತಕ್ಕೆ ಮರಳುವ ಅವರು ಮತ್ತೆ ದೂರದರ್ಶನವನ್ನು ಸೇರಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.