ADVERTISEMENT

ಭಾರತದಲ್ಲಿರಲು ಬಯಸಿದರೆ ‘ರಾಧೆ ರಾಧೆ’ ಎಂದು ಜಪಿಸಿ: UP ಸಚಿವರ ಹೇಳಿಕೆಗೆ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಡಿಸೆಂಬರ್ 2024, 10:50 IST
Last Updated 3 ಡಿಸೆಂಬರ್ 2024, 10:50 IST
<div class="paragraphs"><p>ಮಯಾಂಕೇಶ್ವರ್ ಶರಣ್‌ ಸಿಂಗ್</p></div>

ಮಯಾಂಕೇಶ್ವರ್ ಶರಣ್‌ ಸಿಂಗ್

   

ಲಖನೌ(ಉತ್ತರ ಪ್ರದೇಶ): ‘ಭಾರತದಲ್ಲಿ ವಾಸಿಸಲು ಬಯಸುವವರು ರಾಧೆ-ರಾಧೆ (ರಾಧಾ ಶ್ರೀಕೃಷ್ಣನ ಸಂಗಾತಿ) ಎಂಬುದಾಗಿ ಜಪಿಸಬೇಕು’ ಎಂದು ಉತ್ತರ ಪ್ರದೇಶದ ಸಚಿವ ಮಾಯಂಕೇಶ್ವರ್ ಶರಣ್ ಸಿಂಗ್ ನೀಡಿರುವ ಹೇಳಿಕೆ ವಿವಾದವನ್ನು ಹುಟ್ಟುಹಾಕಿದೆ.

ಸಚಿವರ ಈ ಹೇಳಿಕೆಗೆ ಕಿಡಿಕಾರಿರುವ ವಿರೋಧ ಪಕ್ಷಗಳು ‘ಬಿಜೆಪಿಯು ದೇಶದ ಸಾಮಾಜಿಕ ಪರಿಸರವನ್ನು ಹಾಳುಮಾಡಲು ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿವೆ. 

ADVERTISEMENT

ಉತ್ತರಪ್ರದೇಶದ ಅಮೇಠಿ ಜಿಲ್ಲೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸಚಿವ ಮಾಯಂಕೇಶ್ವರ್ ಶರಣ್ ಸಿಂಗ್, ‘ಹಿಂದೂಸ್ತಾನ್ ಮೇ ರೆಹನಾ ಹೈ ತೊ ರಾಧೆ-ರಾಧೆ ಕಹ್ನಾ ಹೈ’(ನೀವು ಭಾರತದಲ್ಲಿ ವಾಸಿಸಲು ಬಯಸಿದರೆ ನೀವು ರಾಧೆ-ರಾಧೆ ಎಂಬುದಾಗಿ ಜಪಿಸಬೇಕಾಗುತ್ತದೆ) ಎಂದು ಹೇಳಿದ್ದಾರೆ.

ರಾಮ್ ಕಥಾ ಪಾರ್ಕ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಭಿಕರಿಂದ ಮೂರು ಬಾರಿ ‘ರಾಧೆ–ರಾಧೆ’ ಎಂದು ಸಚಿವರು ಹೇಳಿಸಿದ್ದಾರೆ. ಇದರ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಮಂಗಳವಾರ ವ್ಯಾಪಕವಾಗಿ ಹರಿದಾಡಿದೆ.

ತಿಲೋಹಿ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಸಿಂಗ್‌ ವಿರುದ್ಧ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿವೆ. ‘ಬಿಜೆಪಿಯು ಕೋಮು ಸೌಹಾರ್ದಕ್ಕೆ ಭಂಗ ತರಲು ಬಯಸುತ್ತಿದೆ. ಸಚಿವರ ವಿರುದ್ಧ ಕ್ರಮಕೈಗೊಳ್ಳಬೇಕು. ಅವರನ್ನು ಸಂಪುಟದಿಂದ ವಜಾಗೊಳಿಸಬೇಕು’ ಎಂದು ಸಮಾಜವಾದಿ ಪಕ್ಷದ  ಹಿರಿಯ ನಾಯಕರೊಬ್ಬರು ಒತ್ತಾಯಿಸಿದ್ದಾರೆ.

ಈ ಹಿಂದೆ ಘಾಜಿಯಾಬಾದ್‌ನ ಲೋನಿ ಕ್ಷೇತ್ರದ ಬಿಜೆಪಿ ಶಾಸಕ ನಂದ್ ಕಿಶೋರ್ ಗುರ್ಜರ್ ಕೂಡ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕೆಲವು ದಿನಗಳ ಹಿಂದೆ ಗುರ್ಜರ್ ಅವರು ‘ದರ್ಗಾಕ್ಕೆ (ಸೂಫಿ ಸಂತರ ಸಮಾಧಿ) ಹೋಗಬೇಡಿ, ಅಲ್ಲಿ ಜಿಹಾದಿಗಳನ್ನು ಸಮಾಧಿ ಮಾಡಲಾಗಿದೆ. ಅವರು ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ’ ಎಂದು ಹಿಂದೂಗಳಿಗೆ ಕರೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.