ADVERTISEMENT

ಹಿಜಾಬ್ ನಿಷೇಧ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌

ಪಿಟಿಐ
Published 29 ಆಗಸ್ಟ್ 2022, 16:18 IST
Last Updated 29 ಆಗಸ್ಟ್ 2022, 16:18 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌    

ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮೇಲಿನ ನಿಷೇಧವನ್ನು ಎತ್ತಿಹಿಡಿದಿದ್ದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಸಂಬಂಧ ಕರ್ನಾಟಕ ಸರ್ಕಾರದಿಂದ ಸುಪ್ರೀಂ ಕೋರ್ಟ್‌ ಪ್ರತಿಕ್ರಿಯೆ ಕೇಳಿದೆ.

ಅರ್ಜಿಗಳವಿಚಾರಣೆ ಸೋಮವಾರ ನಡೆಸಿದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು.

‘ಕೊನೆಯ ಕ್ಷಣದಲ್ಲಿ ವಿಚಾರಣೆಗೆ ಪಟ್ಟಿ ಮಾಡಲಾಗಿದೆ. ದೇಶದಾದ್ಯಂತದ ಹಿರಿಯ ವಕೀಲರು ವಾದ ಮಾಡಲು ಬಯಸಿದ್ದಾರೆ. ಹಾಗಾಗಿ,ಅರ್ಜಿಯ ವಿಚಾರಣೆಯನ್ನು ಮುಂದೂಡಬೇಕು’ ಎಂದು ಅರ್ಜಿದಾರರ ಪರ ಮೊಹಮ್ಮದ್‌ ನಿಜಾಮ್‌ ಪಾಷಾ ಕೋರಿದರು. ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡ ಪೀಠವು, ‘ನಾವು ಫೋರಂ ಶಾಪಿಂಗ್‌ಗೆ ಅವಕಾಶ ನೀಡುವುದಿಲ್ಲ. ಕಾಲಹರಣ ಮಾಡುವುದು ಸರಿಯಲ್ಲ’ ಎಂದುಹೇಳಿತು.

ADVERTISEMENT

‘ಅರ್ಜಿದಾರರ ಮನವಿಯನ್ನು ಒಪ್ಪಲು ಸಾಧ್ಯವಿಲ್ಲ. ಈ ಮೊದಲು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದೀರಿ. ಈಗ ವಿಚಾರಣೆಯ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಈಗ ವಿಚಾರಣೆ ಮುಂದೂಡಿ ಎಂದು ಮನವಿ ಮಾಡುತ್ತಿದ್ದೀರಿ. ಇದು ಸರಿಯಲ್ಲ’ ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿತು.

‘ವಿಚಾರಣೆಗೆ ಈಗಾಗಲೇ ಪಟ್ಟಿ ಮಾಡಲಾಗಿದೆ. ಮಂಗಳವಾರ ವಾದ ಮಂಡಿಸಿ’ ಎಂದು ಅರ್ಜಿದಾರರ ಪರ ವಕೀಲರಿಗೆ ಪೀಠವು ಸೂಚಿಸಿತು.

ಆಗ ಕರ್ನಾಟಕ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ, ‘ಇದು ಸಂಪೂರ್ಣ ಕಾನೂನಾತ್ಮಕ ವಿಚಾರವಾಗಿದ್ದು, ನ್ಯಾಯಪೀಠವು ನೋಟಿಸ್‌ ಜಾರಿ ಮಾಡುವ ಮೂಲಕ ವಿಚಾರಣೆ ಮಾಡಬೇಕು. ಆದರೆ, ಈ ಕುರಿತು ಕರ್ನಾಟಕ ಸರ್ಕಾರ ಪ್ರತಿಕ್ರಿಯೆ ಸಲ್ಲಿಸುವ ಅಗತ್ಯ ಇಲ್ಲ’ ಎಂದರು.‘ಮೇಲ್ಮನವಿ ಸಲ್ಲಿಸಿರುವ ಅರ್ಜಿದಾರರಿಗೆ ಅರ್ಜಿಯ ತುರ್ತು ವಿಚಾರಣೆ ಬೇಕಿತ್ತು. ಅವರೇ ಅದಕ್ಕೆ ಒತ್ತಾಯಿಸುತ್ತಿದ್ದರು’ ಎಂದು ಅವರು ಹೇಳಿದರು.

ಬಳಿಕ ನ್ಯಾಯಪೀಠವು ಸೆಪ್ಟೆಂಬರ್ 5ಕ್ಕೆ ವಿಚಾರಣೆಯನ್ನು ಮುಂದೂಡಿತು.

ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಬೇಕು ಎಂದು ವಕೀಲರೊಬ್ಬರು ಮನವಿ ಮಾಡಿದರು. ‘ಮುಂದಿನ ಸೋಮವಾರ ಬನ್ನಿ’ ಎಂದು ನ್ಯಾಯಮೂರ್ತಿಗಳು ಹೇಳಿದರು.

‘ಸರ್ಕಾರಿ ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡುವಂತೆ ನಿರ್ದೇಶಿಸಬೇಕು' ಎಂದು ಕೋರಲಾಗಿದ್ದ ಎಲ್ಲ ವೈಯಕ್ತಿಕ ಹಾಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮಾರ್ಚ್‌ 15ರಂದುಸಾರಾಸಗಟಾಗಿ ತಿರಸ್ಕರಿಸಿದ್ದ ಹೈಕೋರ್ಟ್‌ನ ತ್ರಿಸದಸ್ಯ ಪೀಠ, ‘ಈ ವಿಷಯವನ್ನು ದೇಶದಾದ್ಯಂತ ವಿವಾದದ ವಿಷಯವನ್ನಾಗಿ ಮಾಡಿರುವ ಹಿಂದೆ ಕಾಣದ ಕೈಗಳು ಅಡಗಿವೆ’ ಎಂಬ ಸಂಶಯ ವ್ಯಕ್ತಪಡಿಸಿತ್ತು.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.