ನವದೆಹಲಿ: ಆರೋಪಿಯನ್ನು ಜೈಲಿನಲ್ಲಿಯೇ ಇಡಲು ಹಣ ಅಕ್ರಮ ವಹಿವಾಟು ತಡೆ ಕಾಯ್ದೆಯನ್ನು (ಪಿಎಂಎಲ್‌ಎ) ಬಳಸಿಕೊಂಡಿದ್ದಕ್ಕೆ ಜಾರಿ ನಿರ್ದೇಶನಾಲಯವನ್ನು (ಇ.ಡಿ) ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು. ವರದಕ್ಷಿಣೆ ಕಾನೂನಿನಂತೆ ಇದೂ ದುರ್ಬಳಕೆಯಾಗುತ್ತಿದೆಯೇ ಎಂದು ಪ್ರಶ್ನಿಸಿತು.
ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರನ್ನು ಒಳಗೊಂಡ ನ್ಯಾಯಪೀಠವು ಬುಧವಾರ, ಛತ್ತೀಸಗಢದ ಅಬಕಾರಿ ಇಲಾಖೆಯ ಮಾಜಿ ಅಧಿಕಾರಿ ಅರುಣ್ ಪಾಟಿ ತ್ರಿಪಾಠಿ ಅವರಿಗೆ ಜಾಮೀನು ಮಂಜೂರು ಮಾಡಿ ಹೀಗೆ ಕೇಳಿತು.
ದೂರನ್ನು ಪರಿಗಣಿಸಿ ವಿಚಾರಣಾ ನ್ಯಾಯಾಲಯವು ನೀಡಿದ್ದ ಆದೇಶವನ್ನು ಛತ್ತೀಸಗಢ ಹೈಕೋರ್ಟ್ ವಜಾ ಮಾಡಿದ್ದರೂ ಆರೋಪಿಯನ್ನು ಜೈಲಿನಲ್ಲಿ ಇಟ್ಟಿರುವುದೇಕೆ ಎಂದು ಸುಪ್ರೀಂ ಕೋರ್ಟ್ ಅಚ್ಚರಿ ವ್ಯಕ್ತಪಡಿಸಿತು.
ವ್ಯಕ್ತಿಯು ಜೈಲಿನಲ್ಲಿಯೇ ಇರಬೇಕು ಎಂಬುದು ಪಿಎಂಎಲ್‌ಎಯ ಪರಿಕಲ್ಪನೆ ಅಲ್ಲ. ವಿಚಾರಣಾ ನ್ಯಾಯಾಲಯದ ಆದೇಶವನ್ನು ವಜಾಗೊಳಿಸಿದ ನಂತರವೂ ವ್ಯಕ್ತಿಯನ್ನು ಜೈಲಿನಲ್ಲಿ ಇರಿಸುವ ಪ್ರವೃತ್ತಿ ಮುಂದುವರಿದರೆ ಏನು ಹೇಳಲು ಸಾಧ್ಯ? ಸೆಕ್ಷನ್ 498ಎ ಪ್ರಕರಣಗಳು ಏನಾಗುತ್ತಿವೆ ನೋಡಿ. ಪಿಎಂಎಲ್ಎ ಸಹ ಇದೇ ರೀತಿ ದುರ್ಬಳಕೆ ಆಗುತ್ತಿದೆಯೇ ಎಂದು ಪ್ರಶ್ನಿಸಿತು.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಆರೋಪದಲ್ಲಿ ತಮಗೆ ಜಾಮೀನು ನೀಡಬೇಕು ಎಂದು ಭಾರತೀಯ ಟೆಲಿಕಾಂ ಸೇವೆ ಅಧಿಕಾರಿ ತ್ರಿಪಾಠಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಛತ್ತೀಸಗಢ ಹೈಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.