ಕಡಲೂರು (ತಮಿಳುನಾಡು): ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ತಮಿಳುನಾಡಿನ ಕಡಲೂರು ಜಿಲ್ಲೆಯ ಸೆಮ್ಮಂಗುಪ್ಪಂನಲ್ಲಿ ಇಂದು(ಮಂಗಳವಾರ) ಬೆಳಿಗ್ಗೆ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವ್ಯಾನ್ ರೈಲ್ವೆ ಗೇಟ್ ದಾಟುತ್ತಿದ್ದಾಗ ರೈಲು ಡಿಕ್ಕಿ ಹೊಡೆದಿದೆ. ಸ್ವಲ್ಪ ದೂರ ಕ್ರಮಿಸಿದ ನಂತರ ಲೋಕೋ ಪೈಲಟ್ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಗಾಯಾಳುಗಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವ್ಯಾನ್ ಚಾಲಕ ರೈಲು ಸಮೀಪಿಸುತ್ತಿರುವುದನ್ನು ಗಮನಿಸದೆ ಹಳಿ ದಾಟಿದ ಕಾರಣ ಹಠಾತ್ ಡಿಕ್ಕಿ ಸಂಭವಿಸಿದೆ. ಡಿಕ್ಕಿಯಿಂದಾಗಿ ವ್ಯಾನ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ ಎಂದು ಅವರು ಹೇಳಿದ್ದಾರೆ.
'ಬೆಳಿಗ್ಗೆ 7:45ರ ಸುಮಾರಿಗೆ, ವಿದ್ಯಾರ್ಥಿಗಳನ್ನು ಹೊತ್ತ ಶಾಲಾ ವ್ಯಾನ್ ಕಡಲೂರು ಮತ್ತು ಅಲಪ್ಪಕ್ಕಂ ನಡುವಿನ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 170 ದಾಟುತ್ತಿತ್ತು. ಈ ವೇಳೆ ವಿಲ್ಲುಪುರಂ-ಮೈಲಾಡುತುರೈ(ರೈಲು ಸಂಖ್ಯೆ 56813) ಪ್ಯಾಸೆಂಜರ್ ರೈಲಿಗೆ ಡಿಕ್ಕಿ ಹೊಡೆದಿದೆ. ದುರಂತದಲ್ಲಿ 6 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಕಡಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ' ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲ್ವೆ ಪ್ರಾಥಮಿಕ ಮೂಲಗಳ ಪ್ರಕಾರ, ‘ಗೇಟ್ ಕೀಪರ್ ಗೇಟ್ ಮುಚ್ಚಲು ಮುಂದಾದಾಗ, ವ್ಯಾನ್ ಚಾಲಕ ಗೇಟ್ ದಾಟಲು ಬಿಡುವಂತೆ ಪಟ್ಟು ಹಿಡಿದಿದ್ದಾನೆ ಎಂದೆನ್ನಲಾಗಿದೆ. ಆದರೆ ಅದಕ್ಕೆ ಅನುಮತಿಸಬಾರದಿತ್ತು . ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ‘ ಎಂದೂ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.