ADVERTISEMENT

ಎಸ್‌ಇಸಿಐ ಸಿಎಂಡಿ ಗುಪ್ತಾ ವಜಾ

​ಪ್ರಜಾವಾಣಿ ವಾರ್ತೆ
Published 13 ಮೇ 2025, 0:20 IST
Last Updated 13 ಮೇ 2025, 0:20 IST
<div class="paragraphs"><p>ಎಸ್‌ಇಸಿಐ</p></div>

ಎಸ್‌ಇಸಿಐ

   

ನವದೆಹಲಿ: ಕೇಂದ್ರ ಸರ್ಕಾರವು ನಿವೃತ್ತ ಐಎಎಸ್‌ ಅಧಿಕಾರಿ ರಾಮೇಶ್ವರ ಪ್ರಸಾದ್ ಗುಪ್ತಾ ಅವರನ್ನು ಭಾರತೀಯ ಸೌರ ಶಕ್ತಿ ನಿಗಮದ (ಎಸ್‌ಇಸಿಐ) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಿದೆ.

ಉದ್ಯಮಿ ಗೌತಮ್‌ ಅದಾನಿ ವಿರುದ್ಧ ಅಮೆರಿಕದಲ್ಲಿ ದಾಖಲಾಗಿರುವ ಲಂಚ ಪ್ರಕರಣಕ್ಕೂ ಈ ವಜಾಕ್ಕೂ ಸಂಬಂಧ ಇದೆ ಎಂದು ಕಾಂಗ್ರೆಸ್‌ ಹೇಳಿದೆ. ಅದಾನಿ ‘ಹಗರಣ’ವನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ.

ADVERTISEMENT

ಗುಪ್ತಾ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಜಾಗೊಳಿಸಲು ನೇಮಕಾತಿ ಕುರಿತ ಸಂಪುಟ ಸಮಿತಿಯು (ಎಸಿಸಿ) ಅನುಮೋದನೆ ನೀಡಿದೆ ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯ ಆದೇಶದಲ್ಲಿ ಶನಿವಾರ ತಿಳಿಸಿದೆ. ಗುಪ್ತಾ ಅವರ ಅಧಿಕಾರಾವಧಿ ಪೂರ್ಣಗೊಳ್ಳಲು ಕೇವಲ ಒಂದು ತಿಂಗಳು ಇರುವಾಗ ಈ ಬೆಳವಣಿಗೆ ನಡೆದಿದೆ. ಅವರ ಅಧಿಕಾರಾವಧಿಯನ್ನು ಮೊಟಕುಗೊಳಿಸಿದ್ದಕ್ಕೆ ಯಾವುದೇ ಅಧಿಕೃತ ಕಾರಣವನ್ನು ಉಲ್ಲೇಖಿಸಿಲ್ಲ.

‘ಗೌತಮ್ ಅದಾನಿ ಮತ್ತು ಅವರ ಆಪ್ತರ ವಿರುದ್ಧದ ಆರೋಪ ಪಟ್ಟಿಯಲ್ಲಿ ಅಮೆರಿಕದ  ಅಧಿಕಾರಿಗಳು  ಎಸ್‌ಇಸಿಐ ವಿರುದ್ಧವೂ ದೋಷಾರೋಪಣೆ ಮಾಡಿದ್ದರು. ವಿವಿಧ ರಾಜ್ಯಗಳು ಎಸ್‌ಇಸಿಐ ಶಿಫಾರಸಿನ ಮೇಲೆ ಅದಾನಿ ಜೊತೆ ಖರೀದಿ ಒಪ್ಪಂದಗಳನ್ನು ಮಾಡಿಕೊಂಡಿದ್ದವು. ನಂತರ ಈ ಒಪ್ಪಂದಗಳಿಗೆ ಬದಲಾಗಿ ಭಾರತದ ಸರ್ಕಾರಿ ಅಧಿಕಾರಿಗಳಿಗೆ ₹2,029 ಕೋಟಿ ಲಂಚದ ಭರವಸೆ ನೀಡಲಾಗಿತ್ತು’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಹೇಳಿದ್ದಾರೆ.

‘ಭ್ರಷ್ಟಾಚಾರ ನಡೆದಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತೆ, ಎಸ್‌ಇಸಿಐ 2024ರ ಡಿಸೆಂಬರ್‌ನಲ್ಲಿ ವಿದ್ಯುತ್ ಟೆಂಡರ್‌ಗಳನ್ನು ನೀಡುವ ತನ್ನ ವಿಧಾನವನ್ನು ಬದಲಾಯಿಸಿದೆ. ಇದೀಗ ಎಸ್‌ಇಸಿಐ ಸಿಎಂಡಿಯನ್ನು ಸರ್ಕಾರ ವಜಾಗೊಳಿಸಿದೆ. ಉನ್ನತ ಮಟ್ಟದಲ್ಲಿ ಎಷ್ಟೇ ಪ್ರಯತ್ನಗಳೂ ನಡೆದರೂ, ‘ಮೋದಾನಿ ಮೆಗಾ ಹಗರಣ’  ಮುಚ್ಚಿಹಾಕಲು  ಸಾಧ್ಯವಿಲ್ಲ’ ಎಂದಿದ್ದಾರೆ.

 ಭಾರತದ  ಸರ್ಕಾರಿ ಸ್ವಾಮ್ಯದ  ವಿದ್ಯುತ್‌ ಸರಬರಾಜು  ಕಂಪನಿಗಳಿಗೆ ಸೌರ ವಿದ್ಯುತ್‌ ಪೂರೈಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ಅದಾನಿ ಸಮೂಹದ ಮುಖ್ಯಸ್ಥ ಗೌತಮ್‌ ಅದಾನಿ ಹಾಗೂ ಅವರ ಆಪ್ತರು ಭಾರತದ ಅಧಿಕಾರಿಗಳಿಗೆ ಲಂಚ ನೀಡಲು ಮುಂದಾಗಿದ್ದರು ಎಂದು ಅಮೆರಿಕದ ಅಧಿಕಾರಿಗಳು ಕಳೆದ ವರ್ಷದ ನವೆಂಬರ್‌ನಲ್ಲಿ ಆರೋಪಿಸಿದ್ದರು. 

ಗೌತಮ್‌ ಅದಾನಿ, ಅವರ ಅಣ್ಣನ ಮಗ ಸಾಗರ್‌ ಅದಾನಿ ಹಾಗೂ ಇತರ ಆರು ಜನರ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ಹೊರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.