ADVERTISEMENT

ಅಯೋಧ್ಯೆಯಲ್ಲಿ ಡಿಸೆಂಬರ್‌ 10ರ ವರೆಗೂ ಸೆಕ್ಷನ್‌ 144 ಅನ್ವಯ ನಿಷೇಧಾಜ್ಞೆ ಜಾರಿ

ಮುನ್ನೆಚ್ಚರಿಕೆ ಕ್ರಮ

ಏಜೆನ್ಸೀಸ್
Published 14 ಅಕ್ಟೋಬರ್ 2019, 4:31 IST
Last Updated 14 ಅಕ್ಟೋಬರ್ 2019, 4:31 IST
ಅಯೋಧ್ಯೆಯಲ್ಲಿ ಬಿಗಿ ಭದ್ರತೆ– ಸಾಂದರ್ಭಿಕ ಚಿತ್ರ
ಅಯೋಧ್ಯೆಯಲ್ಲಿ ಬಿಗಿ ಭದ್ರತೆ– ಸಾಂದರ್ಭಿಕ ಚಿತ್ರ   

ಲಖನೌ:ಸುಪ್ರೀಂ ಕೋರ್ಟ್‌ ನೀಡಲಿರುವ ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣದ ತೀರ್ಪು ಹಾಗೂ ಮುಂಬರಲಿರುವ ಧಾರ್ಮಿಕ ಆಚರಣೆಗಳನ್ನು ಗಮನದಲ್ಲಿರಿಸಿಕೊಂಡು ಅಯೋಧ್ಯೆಯಲ್ಲಿ ಡಿಸೆಂಬರ್‌ 10ರ ವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಸಿಆರ್‌ಪಿಸಿ ಸೆಕ್ಷನ್‌ 144ರ ಅಡಿಯಲ್ಲಿ ಅಕ್ಟೋಬರ್ 12ರಿಂದಲೇ ನಿರ್ಬಂಧ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನುಜ್‌ ಕುಮಾರ್‌ ಝಾ ತಿಳಿಸಿದ್ದಾರೆ.

ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣದ ವಿಚಾರಣೆ ಅಂತಿಮ ಘಟ್ಟ ತಲುಪಿದ್ದು, ಸೋಮವಾರದಿಂದ ಕೊನೆಯ ಹಂತದ ವಿಚಾರಣೆ ಆರಂಭವಾಗಲಿದೆ.ಪ್ರಕ್ರಿಯೆ ಪೂರ್ಣಗೊಳಿಸಲು ಅಕ್ಟೋಬರ್ 17ರ ಗಡುವು ನಿಗದಿಪಡಿಸಲಾಗಿದೆ.ನವೆಂಬರ್ 17ರಂದು ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟಿಸಲಿದೆ.

ADVERTISEMENT

ಜಿಲ್ಲಾಡಳಿತದಿಂದ ಅನುಮತಿ ಪಡೆಯದೆಯೇ ಅಯೋಧ್ಯೆಯಲ್ಲಿ ಡ್ರೋನ್‌ಗಳು ಮತ್ತು ಮಾನವ ರಹಿತ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿದೆ. ಅಯೋಧ್ಯೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ದೋಣಿಗಳಲ್ಲಿ ಸಂಚರಿಸುವಂತಿಲ್ಲ. ದೀಪಾವಳಿ ಪ್ರಯುಕ್ತ ಪಟಾಕಿಗಳ ಉತ್ಪಾದನೆ ಮತ್ತು ಮಾರಾಟಕ್ಕಾಗಿ ಜಿಲ್ಲಾಡಳಿತದಿಂದ ಅನುಮತಿ ಪಡೆಯುವುದು ಕಡ್ಡಾಯಗೊಳಿಸಲಾಗಿದೆ.

ಅಯೋಧ್ಯೆ ಮತ್ತು ಅಯೋಧ್ಯೆಗೆ ಭೇಟಿ ನೀಡುವವರ ಸುರಕ್ಷತೆ ಮತ್ತು ಭದ್ರತಾ ಕಾರಣಗಳಿಂದಾಗಿ ಈ ಆದೇಶ ಹೊರಡಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸುಪ್ರೀಂ ನೀಡಲಿರುವ ಅಯೋಧ್ಯೆ ತೀರ್ಪಿನ ಜತೆಗೆ ಹಲವು ಹಬ್ಬಗಳ ಆಚರಣೆಯನ್ನು ಗಮನದಲ್ಲಿರಿಸಿಕೊಂಡು ಜಿಲ್ಲಾಧಿಕಾರಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ದೀಪಾವಳಿ, ನರಕ ಚತುರ್ದಶಿ, ಗೋವರ್ಧನ ಪೂಜೆ, ಚಿತ್ರಗುಪ್ತ ಜಯಂತಿ, ಪಾಂಚ್‌ ಕೋಸಿ ಪರಿಕ್ರಮ, ಕಾರ್ತಿಕ ಪೂರ್ಣಿಮೆ ಮೇಳ, ಗುರು ನಾನಕ್‌ ಜಯಂತಿ, ಬಾರಾವ್ಫಾತ್‌,..ಸೇರಿದಂತೆ ಹಲವು ಆಚರಣೆಗಳು ನಡೆಯಲಿವೆ. ಡಿಸೆಂಬರ್‌ 6ರಂದು ಬಾಬರಿ ಬಸೀದಿ ಧ್ವಂಸಗೊಳಿಸಿದ ದಿನ.

ಕಾನೂನು ಬಾಹಿರವಾಗಿ ಗುಂಪು ಸೇರುವುದು, ಅಹಿತಕರ ಚಟುವಟಿಕೆಗಳನ್ನು ನಡೆಸುವುದಕ್ಕೆ ನಿರ್ಬಂಧ ಹೇರಿ ಆಗಸ್ಟ್‌ 31ರಂದೇ ಆದೇಶ ಹೊರಡಿಸಲಾಗಿದೆ. ಆದೇಶಕ್ಕೆ ಇನ್ನಷ್ಟು ಅಂಶಗಳನ್ನು ಸೇರ್ಪಡೆಗೊಳಿಸಿ ಅಕ್ಟೋಬರ್‌ 12ರಂದು ಮತ್ತೊಂದು ಆದೇಶ ಹೊರಡಿಸಲಾಗಿದೆ.

ರಾಮಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣದಲ್ಲಿ ಮುಸ್ಲಿಂ ಅರ್ಜಿದಾರರು ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಬೇಕಿದೆ. ಮುಂದಿನ ಎರಡು ದಿನಗಳನ್ನು ಹಿಂದೂ ಅರ್ಜಿದಾರರಿಗೆ ಮೀಸಲಿರಿಸಲಾಗಿದೆ. ಅ. 17ರಂದು ವಿಚಾರಣೆ ಅಂತಿಮಗೊಳ್ಳಲಿದ್ದು, ಅಂದು ಎರಡೂ ಕಡೆಯವರು ತಮ್ಮ ಕೊನೆಯ ವಾದವನ್ನು ಪೂರ್ಣಗೊಳಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.