ನಾಸಿಕ್: ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮುಖಕ್ಕೆ ಮಸಿ ಬಳಿಯುತ್ತೇವೆ ಎಂದು ಶಿವಸೇನಾ (ಯುಬಿಟಿ) ಮುಖಂಡ ಬಾಳಾ ದರಾದೆ ಬುಧವಾರ ಎಚ್ಚರಿಸಿದ್ದಾರೆ. ಇದಕ್ಕೆ ಮಹಾರಾಷ್ಟ್ರ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಸಾವರ್ಕರ್ ಜನ್ಮದಿನದ ಪ್ರಯುಕ್ತ ಮರಾಠಿ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿರುವ ದರಾದೆ, 'ಸ್ವಾತಂತ್ರ್ಯ ವೀರ ಸಾವರ್ಕರ್ ಹುಟ್ಟಿದ ನಾಡಲ್ಲಿ ಬದುಕುತ್ತಿದ್ದೇವೆ ಎಂಬ ಹೆಮ್ಮೆ ನಮಗಿದೆ. ರಾಹುಲ್ ಗಾಂಧಿ, ಸಾವರ್ಕರ್ ಅವರನ್ನು 'ಮಾಫಿ–ವೀರ್' ಎಂದಿರುವುದು ಅವಹೇಳನಕಾರಿಯಾಗಿದೆ. ಅದನ್ನು ಬಲವಾಗಿ ಖಂಡಿಸುತ್ತೇವೆ. ರಾಹುಲ್ ನಾಸಿಕ್‌ಗೆ ಬಂದರೆ, ಕಪ್ಪು ಮಸಿ ಬಳಿಯುತ್ತೇವೆ. ನಮ್ಮಿಂದ ಅದು ಸಾಧ್ಯವಾಗದಿದ್ದರೆ, ಅವರ (ರಾಹುಲ್ ಗಾಂಧಿ) ಬೆಂಗಾವಲು ಪಡೆಯತ್ತ ಕಲ್ಲು ತೂರುತ್ತೇವೆ' ಎಂದು ಹೇಳಿದ್ದಾರೆ.
ಕಾಂಗ್ರೆಸ್, ಶಿವಸೇನಾ (ಯುಬಿಟಿ) ಹಾಗೂ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಪಕ್ಷಗಳು ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿರುವ ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟದ ಭಾಗವಾಗಿವೆ.
ಶಿವಸೇನಾ (ಯುಬಿಟಿ) ನಾಸಿಕ್ ಘಟಕದ ಉಪಾಧ್ಯಕ್ಷರೂ ಆಗಿರುವ ಬಾಳಾ ದರಾದೆ ನೀಡಿರುವ ಈ ಹೇಳಿಕೆಯು ಎಂವಿಎ ಮೈತ್ರಿಕೂಟದಲ್ಲಿ ಬಿರುಕು ಮೂಡಿಸಿದೆ.
ತಮ್ಮ ಹೇಳಿಕೆಯಿಂದ ಎಂವಿಎ ಮೈತ್ರಿ ಮೇಲೆ ಯಾವುದೇ ಪರಿಣಾಮ ಉಂಟಾದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ದರಾದೆ ಹೇಳಿದ್ದಾರೆ.
'ಸಾವರ್ಕರ್ ವಿರುದ್ಧ ಅವಹೇಳನಕಾರಿಯಾಗಿ ಯಾರು ಮಾತನಾಡಿದರೂ ಸಹಿಸುವುದಿಲ್ಲ. ಮಹಾ ವಿಕಾಸ ಆಘಾಡಿಯ ಭವಿಷ್ಯ ಏನುಬೇಕಾದರೂ ಆಗಲಿ, ನಾವು ಸಾವರ್ಕರ್ ಅವಮಾನವನ್ನು ಸಹಿಸುವುದಿಲ್ಲ' ಎಂದಿದ್ದಾರೆ.
ಆದರೆ, ಶಿವಸೇನಾ (ಯುಬಿಟಿ) ವಕ್ತಾರ ಸುಷ್ಮಾ ಅಂಧರೆ, ಬಾಳಾ ದರಾದೆ ಹೇಳಿಕೆಯು ಅವರ ವೈಯಕ್ತಿಕ ಅಭಿಪ್ರಾಯ. ಉದ್ಧವ್ ಠಾಕ್ರೆ ಅವರ ಪಕ್ಷದ ನಿಲುವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾಸಿಕ್ ನಿವಾಸಿ ದೇವೇಂದ್ರ ಭುತಾಡ ಎಂಬವರು, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ರಾಹುಲ್ ಅವರ ಹೇಳಿಕೆಯು ತಮ್ಮ ಭಾವನೆಗಳನ್ನು ಘಾಸಿಗೊಳಿಸಿದೆ ಎಂದಿದ್ದು, ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಬಾಳಾ ದರಾದೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಕಪಾಲ್, 'ಹೇಡಿತನದ' ಬೆದರಿಕೆ ಎಂದಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ರಾಹುಲ್ ಗಾಂಧಿ ಅವರ ತಂದೆ ದಿ. ರಾಜೀವ್ ಗಾಂಧಿ ಮತ್ತು ಅಜ್ಜಿ ದಿ. ಇಂದಿರಾ ಗಾಂಧಿ ಅವರು ಭಾರತದ ಏಕತೆಗಾಗಿ ಪ್ರಾಣ ಬಿಟ್ಟವರು. ಕಾಂಗ್ರೆಸ್ ಮತ್ತು ಅದರ ನಾಯಕತ್ವವು ಇಂತಹ ಬೆದರಿಕೆಗಳಿಗೆ ಜಗ್ಗುವುದಿಲ್ಲ' ಎಂದಿದ್ದಾರೆ.
ರಾಹುಲ್ ಅವರು ಸಾವರ್ಕರ್ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆಯನ್ನು ನೀಡಿಲ್ಲ ಎಂದು ಸಮರ್ಥಿಸಿಕೊಂಡಿರುವ ಸಕಪಾಲ್, 'ಅವರ (ರಾಹುಲ್ ಗಾಂಧಿ) ಹೇಳಿಕೆಗಳು ಐತಿಹಾಸಿಕ ಉಲ್ಲೇಖಗಳನ್ನು ಒಳಗೊಂಡಿವೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಅರುಣ್ ಶೌರೀ (ಪತ್ರಕರ್ತ, ಬರಹಗಾರ) ಅವರೇ ಸಾವರ್ಕರ್ ಬಗ್ಗೆ ಪುಸ್ತಕ ಬರೆದಿದ್ದಾರೆ. ರಾಹುಲ್ ಹೇಳಿಕೆ ನೀಡಿರುವಂತಹ ಅಂತಹ ಹಲವು ಉಲ್ಲೇಖಗಳು ಅದರಲ್ಲಿವೆ. ಈ ರೀತಿಯ ಬೆದರಿಕೆಗಳನ್ನು ನಿಯಂತ್ರಿಸುವ ಸಾಮರ್ಥ್ಯ ನಮ್ಮ ಕಾರ್ಯಕರ್ತರಿಗೆ ಇದೆ' ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನ ಮತ್ತೊಬ್ಬ ನಾಯಕಿ ಯಶೋಮತಿ ಠಾಕೂರ್, 'ಇತಿಹಾಸದಲ್ಲಿ ಉಲ್ಲೇಖಿಸಲಾಗಿರುವುದನ್ನೇ ರಾಹುಲ್ ಪುನರುಚ್ಛರಿಸಿದ್ದಾರೆ ಅಷ್ಟೇ' ಎಂದಿದ್ದಾರೆ. ಮುಂದುವರಿದು, ಕಾಂಗ್ರೆಸ್ ಪಕ್ಷವು ಅಹಿಂಸೆಯಲ್ಲಿ ನಂಬಿಕೆ ಇಟ್ಟಿದೆ. ಆದರೆ, ಬೆದರಿಕೆಗಳಿಗೆ ತಕ್ಕ ಪ್ರತ್ಯುತ್ತರ ನೀಡುವ ಸಾಮರ್ಥ್ಯವನ್ನೂ ಹೊಂದಿದೆ ಎಂದು ಹೇಳಿದ್ದಾರೆ. ಆ ಮೂಲಕ, ಯಾವುದೇ ತಂತ್ರಗಳಿಗೆ ಸಿದ್ಧ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.