ADVERTISEMENT

ಲಖನೌ: 3 ವರ್ಷಗಳಿಂದ ತಂದೆ–ಮಗಳನ್ನು ಕೂಡಿ ಹಾಕಿದ್ದ ಮನೆಕೆಲಸದವರು

ನಿವೃತ್ತ ರೈಲ್ವೆ ಉದ್ಯೋಗಿ ಸಾವು, ಮಗಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 15:39 IST
Last Updated 30 ಡಿಸೆಂಬರ್ 2025, 15:39 IST
   

ಲಖನೌ: ನಿವೃತ್ತ ರೈಲ್ವೆ ಉದ್ಯೋಗಿ ಮತ್ತು ಮಾನಸಿಕವಾಗಿ ಅಸ್ವಸ್ಥರಾಗಿದ್ದ ಅವರ ಮಗಳನ್ನು ಮನೆ ಕೆಲಸ ಮಾಡುವ ದಂಪತಿ ಮೂರು ವರ್ಷಗಳಿಂದ ಕೂಡಿ ಹಾಕಿ ಆಹಾರ ನೀಡದೆ ಕಿರುಕುಳ ನೀಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ನಿವೃತ್ತ ರೈಲ್ವೆ ಉದ್ಯೋಗಿ ಮೃತಪಟ್ಟಿದ್ದು, ಅವರ ಮಾನಸಿಕ ಅಸ್ವಸ್ಥೆ ಮಗಳು‌ ತೀವ್ರ ಅನಾರೋಗ್ಯದಿಂದ ಅಸ್ಥಿಪಂಜರದಂತಾಗಿದ್ದಾರೆ. 

ಆಸ್ತಿ ದುರಾಸೆಗೆ ಈ ಕೃತ್ಯ ನಡೆಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. 

ADVERTISEMENT

ಮೃತ ವ್ಯಕ್ತಿಯನ್ನು ಓಂ ಪ್ರಕಾಶ್‌ ರಾಥೋಡ್‌ ಎಂದು ಗುರುತಿಸಲಾಗಿದೆ. ಅವರು ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್ ಆಗಿ ನಿವೃತ್ತರಾಗಿದ್ದರು. ಸರಿಯಾಗಿ ಆಹಾರ ಮತ್ತು ಆರೈಕೆ ಸಿಗದ ಕಾರಣ ಅವರು ಸೋಮವಾರ ಮೃತಪಟ್ಟರು. ಅವರ ಪುತ್ರಿ ರಶ್ಮಿ ಮೈಮೇಲೆ ಬಟ್ಟೆಯಿಲ್ಲದೆ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರಶ್ಮಿಯನ್ನು ಆಸ್ಪತ್ರೆಗೆ ದಾಖಲಾಗಿದೆ.

ರಾಥೋಡ್‌ ಅವರು ನಿವೃತ್ತಿಯ ನಂತರ ತಮ್ಮ ಮಗಳೊಂದಿಗೆ ಮಹೋಬಾ ನಗರದಲ್ಲಿ ನೆಲಸಿದ್ದರು. ಅವರ ಪತ್ನಿ ಒಂಬತ್ತು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ತಮ್ಮ ಮತ್ತು ಮಗಳ ಆರೈಕೆಗಾಗಿ ರಾಮ್‌ಪ್ರಕಾಶ್‌ ಕುಶ್ವಾ ಮತ್ತು ಅವರ ಪತ್ನಿ ರಾಮ್‌ದೇವಿ ಅವರನ್ನು ನೇಮಿಸಿಕೊಂಡಿದ್ದರು. 

ಮನೆ ಕೆಲಸ ಮಾಡುವ ದಂಪತಿ ಇಡೀ ಮನೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಮೂರು ವರ್ಷಗಳಿಂದ ರಾಥೋಡ್‌ ಮತ್ತು ಅವರ ಪುತ್ರಿಯನ್ನು ಕೋಣೆಯಲ್ಲಿ ಕೂಡಿಹಾಕಿದ್ದರು ಮತ್ತು ಅವರಿಗೆ ಸರಿಯಾಗಿ ಆಹಾರ ನೀಡುತ್ತಿರಲಿಲ್ಲ. ಸಂಬಂಧಿಕರನ್ನು ಕೂಡ ಭೇಟಿಯಾಗಲು ಬಿಡುತ್ತಿರಲಿಲ್ಲ ಎಂದು ಆರೋಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.