ಅಮಿತ್ ಶಾ
ಕೊಯಮತ್ತೂರು: ಕೇಂದ್ರ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಮಿಳುನಾಡಿಗೆ ತಾರತಮ್ಯ ಮಾಡುತ್ತಿದೆ ಎನ್ನುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆರೋಪವನ್ನು ಅಲ್ಲಗಳೆದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, 10ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ₹5 ಲಕ್ಷ ಕೋಟಿ ಅನುದಾನ ನೀಡಿದೆ ಎಂದು ಹೇಳಿದರು.
ನರೇಂದ್ರ ಮೋದಿ ಸರ್ಕಾರ 2014 ರಿಂದ 2024ರವರೆಗೆ ₹5,08,337 ಕೋಟಿ ಅನುದಾನ ನೀಡಿದೆ. ಸ್ಟಾಲಿನ್ ಅವರು ತಪ್ಪು ಮಾಹಿತಿಯನ್ನು ಹರಡುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಇದೇ ವಿಷಯವಾಗಿ ಮಾರ್ಚ್ 5ರಂದು ಎಲ್ಲಾ ಪಕ್ಷಗಳ ಸಭೆ ಕರೆಯಲಾಗಿದೆ’ ಎಂದರು
ತಮಿಳುನಾಡಿನಲ್ಲಿ ನೂತನ ಬಿಜೆಪಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಶಾ, ಆಡಳಿತಾರೂಢ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದರು. ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವಿಫಲವಾಗಿದೆ, ದೇಶ ವಿರೋಧಿ ಪ್ರವೃತ್ತಿಗಳು ಎಂದಿಗಿಂತ ತಮಿಳುನಾಡಿನಲ್ಲಿ ಹೆಚ್ಚಾಗಿದೆ’ ಎಂದು ಆರೋಪಿಸಿದರು.
‘1998ರ ಬಾಂಬ್ ಸ್ಫೋಟದ ಆರೋಪಿ ಮತ್ತು ಮಾಸ್ಟರ್ ಮೈಂಡ್ ಎಸ್‌ಎ ಬಾಶಾನ ಅಂತಿಮ ಸಂಸ್ಕಾರದ ವೇಳೆ ಭದ್ರತೆ ಒದಗಿಸಿದ್ದು ಇದೇ ತಮಿಳುನಾಡು ಸರ್ಕಾರ. ಡ್ರಗ್ ಮಾಫಿಯಾ ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ, ಅಕ್ರಮ ಗಣಿಗಾರಿಕೆ ಮಾಫಿಯಾ ರಾಜಕೀಯವನ್ನು ಭ್ರಷ್ಟವಾಗುವಂತೆ ಮಾಡಿದೆ. ಡಿಎಂಕೆಯ ಎಲ್ಲಾ ನಾಯಕರು ಭ್ರಷ್ಟಾಚಾರದಲ್ಲಿ ಉನ್ನತ ಡಿಗ್ರಿ ಪಡೆದಿದ್ದಾರೆ’ ಎಂದು ಆರೋಪಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರ ದಕ್ಷಿಣ ರಾಜ್ಯಗಳನ್ನು ಎಂದಿಗೂ ಕಡೆಗಣಿಸುವುದಿಲ್ಲ ಎಂದು ಪುನರುಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.