ಡೊನಾಲ್ಡ್ ಟ್ರಂಪ್ ಮತ್ತು ಶಶಿ ತರೂರ್
–ಪಿಟಿಐ ಚಿತ್ರಗಳು
ಪುಣೆ: ‘ಭಾರತದ ಆರ್ಥಿಕತೆ ಸತ್ತಿದೆ’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಅವಮಾನಕಾರವಾಗಿದ್ದು, ಅದನ್ನು ಅಕ್ಷರಶಃ ತೆಗೆದುಕೊಳ್ಳಬಾರದು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಪುಣೆಯಲ್ಲಿ ಕ್ರಾಸ್‌ವರ್ಡ್ ಸಿಇಒ ಆಕಾಶ್ ಗುಪ್ತಾ ಅವರೊಂದಿಗಿನ ಸಂವಾದದಲ್ಲಿ ಭಾಗಿಯಾಗಿರುವ ಶಶಿ ತರೂರ್ ಅವರು ‘ದಿ ಲಿವಿಂಗ್ ಕಾನ್‌ಸ್ಟಿಟ್ಯೂಷನ್’ ಪುಸ್ತಕ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ.
‘ಜಗತ್ತಿನ ಕೆಲವು ದೊಡ್ಡ ಶಕ್ತಿಗಳ (ದೇಶಗಳು) ಸಕ್ರಿಯ ಪಾಲ್ಗೊಳ್ಳುವಿಕೆಯಿಂದಾಗಿ ಯುದ್ಧಗಳು ನಡೆಯುತ್ತಿರುವಾಗ ಮತ್ತು ನಿಯಮಗಳನ್ನು ಎತ್ತಿಹಿಡಿಯಬೇಕಾದ ಜನರು ಅವ್ಯವಸ್ಥೆಯನ್ನು ಉತ್ತೇಜಿಸುತ್ತಿರುವಾಗ ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳ ಬಗ್ಗೆ ಬಹಳ ಸ್ಪಷ್ಟತೆ ಹೊಂದಿರಬೇಕು’ ಎಂದು ತರೂರ್ ಹೇಳಿದ್ದಾರೆ.
'ಟ್ರಂಪ್ ಬಗ್ಗೆ ನಾನು ಹೇಳುವುದೇನೆಂದರೆ, ಅವರು (ಟ್ರಂಪ್) ಅಮೆರಿಕದ ಅಧ್ಯಕ್ಷರಾಗಿರುವುದರಿಂದ ಅವರು ತೆಗೆದುಕೊಳ್ಳುವ ನಿರ್ಧಾರಗಳು ದ್ವಿಪಕ್ಷೀಯ ನೀತಿಗಳ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಅವರನ್ನು ಗಂಭೀರವಾಗಿ ಪರಿಗಣಿಸಬೇಕು. ಆದರೆ, ಅವರು ನೀಡುವ ಹೇಳಿಕೆಗಳನ್ನು ಅಕ್ಷರಶಃ ತೆಗೆದುಕೊಳ್ಳಬಾರದು’ ಎಂದು ತರೂರ್ ತಿಳಿಸಿದ್ದಾರೆ.
‘ಭಾರತದ ಆರ್ಥಿಕತೆ ಸತ್ತಿದೆ’ ಎಂದು ಟ್ರಂಪ್ ಹೇಳಿರುವುದು ‘ಆಟದ ಮೈದಾನದಲ್ಲಿ ಶಾಲಾ ಬಾಲಕನೊಬ್ಬ ನಿಮ್ಮ ತಾಯಿ ಕೊಳಕು’ ಎಂದು ಹೇಳಿದಂತಿದೆ. ಹಾಗಾಗಿ ಅವರ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು’ ಎಂದಿದ್ದಾರೆ.
ಕಳೆದ ಆರು ತಿಂಗಳಿನಿಂದ ಟ್ರಂಪ್ ಅವರ ಸುಂಕ ನೀತಿಗಳ ಪರಿಣಾಮವು ಇಡೀ ಜಗತ್ತನ್ನು ಹಿಂದಕ್ಕೆ ಕೊಂಡೊಯ್ದಿದೆ. ಭಾರತವೂ ಕೇವಲ ಎರಡು ಮೂರು ದಿನಗಳ ಹಿಂದೆ ಸ್ವಲ್ಪ ಆಘಾತಕ್ಕೊಳಗಾಗಿತ್ತು ಎಂದು ತರೂರ್ ಹೇಳಿದ್ದಾರೆ.
ಭಾರತವು ತನ್ನ ಹಿತಾಸಕ್ತಿಗಳು ಮತ್ತು ಜನರ ಪರ ಹೇಗೆ ನಿಲ್ಲಬೇಕು ಎಂಬುದರ ಬಗ್ಗೆ ಈಗಾಗಲೇ ಸ್ಪಷ್ಟತೆಯನ್ನು ಹೊಂದಿದೆ. ಹಾಗಾಗಿ ಅನಿಶ್ಚಿತತೆಯನ್ನು ಬುದ್ಧಿವಂತಿಕೆಯಿಂದ ಎದುರಿಸುತ್ತದೆ ಎಂದು ತರೂರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.