ADVERTISEMENT

ನೆಟ್ಟಿಗನ ಇಂಗ್ಲಿಷ್‌ಗೆ ಬೆರಗಾದ ಶಶಿ ತರೂರ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಆಗಸ್ಟ್ 2025, 11:04 IST
Last Updated 16 ಆಗಸ್ಟ್ 2025, 11:04 IST
   

ನವದೆಹಲಿ: ಇಂಗ್ಲಿಷ್‌ನ ಕ್ಲಿಷ್ಟಕರ ಪದಗಳನ್ನು ಪ್ರಯೋಗಿಸುವ ಮೂಲಕ ಎಲ್ಲರನ್ನು ಬೆರಗಾಗಿಸುತ್ತಿದ್ದ ಸಂಸದ ಶಶಿ ತರೂರ್ ಈಗ ಎಕ್ಸ್ ಬಳಕೆದಾರರೊಬ್ಬರ ಭಾಷಾ ಕೌಶಲ ಕಂಡು ಸ್ವತಃ ಬೆರಗಾಗಿದ್ದಾರೆ.

ಹೌದು... ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಕುರಿತಂತೆ ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್‌ ಅವರು ಭಾರತವನ್ನು ಟೀಕಿಸಿದ್ದರು. ಈ ವಿಚಾರವಾಗಿ ಮಾತುಕತೆಗೆ ಭಾರತ ಹಿಂಜರಿಯುತ್ತಿದೆ ಎಂದು ದೂರಿದ್ದರು.

ಇದಕ್ಕೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದ ತರೂರ್‌, ‘ವ್ಯಾಪಾರ ಒಪ್ಪಂದಕ್ಕೆ ಭಾರತವು ಹಿಂಜರಿಯುತ್ತಿದೆ ಎಂದು ಕೆಲವರು ಆರೋಪ ಮಾಡುವುದನ್ನು ನಾನು ಕೇಳಿದ್ದೇನೆ. ಅನ್ಯಾಯವನ್ನು ಒಪ್ಪಿಕೊಳ್ಳುವುದು ಅಥವಾ ಅದಕ್ಕೆ ವಿಧೇಯರಾಗುವುದಕ್ಕಿಂತ ಹಿಂಜರಿಯುವುದು ಉತ್ತಮ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದ್ದರು.

ADVERTISEMENT

ಈ ಪೋಸ್ಟ್‌ಗೆ ‘sagarcasm’ ಯುಸರ್‌ ನೇಮ್‌ನಿಂದ ಗುರುತಿಕೊಂಡಿರುವ ಎಕ್ಸ್‌ ಬಳಕೆದಾರರೊಬ್ಬರು ತರೂರ್‌ ಅವರ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕ್ಲಿಷ್ಟಕರ ಮತ್ತು ವಿರಳ ಇಂಗ್ಲಿಷ್‌ ಪದಗಳನ್ನು ಬಳಸಿರುವ ಅವರ ಪೋಸ್ಟ್‌ ಕಂಡು ಸ್ವತಃ ತರೂರ್‌ ಅವರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ಸಹೋದರ.. ನೀನು ಏನು ಹೇಳ್ತಿದ್ದೀಯಾ?’ ಎಂದು ಕೇಳಿದ್ದಾರೆ.

‘ಆಂಗ್ಲ ಭಾಷಾ ಪಂಡಿತ’ ಶಶಿ ತರೂರ್‌ ಅವರನ್ನೇ ಬೆರಗಾಗುವಂತೆ ಮಾಡಿದ ಎಕ್ಸ್‌ ಬಳಕೆದಾರರ ಪೋಸ್ಟ್‌ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ‘ಶಶಿ ತರೂರ್‌ ಕೈಯಲ್ಲಿ ಹಿಂದಿಯಲ್ಲಿ ಬರೆಯುವಂತೆ ಮಾಡಿದ ಮೊದಲ ವ್ಯಕ್ತಿ’ ಎಂದು ಕೊಂಡಾಡಿದ್ದಾರೆ.

ಇತ್ತೀಚೆಗೆ ‘ಜವಾನ್‌’ ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದ ಬಾಲಿವುಡ್‌ ನಟ ಶಾರುಕ್‌ ಖಾನ್‌ ಅವರಿಗೆ ಸರಳ ಪದಗಳ ಮೂಲಕ ತರೂರ್ ಅಭಿನಂದನೆ ತಿಳಿಸಿದ್ದರು. ಇದಕ್ಕೆ ಕ್ಲಿಷ್ಟಕರ ಇಂಗ್ಲಿಷ್‌ ಪದಗಳನ್ನು ಬಳಸಿ ಶಾರುಕ್‌ ಧನ್ಯವಾದ ಹೇಳಿರುವುದು ಭಾರಿ ವೈರಲ್‌ ಆಗಿತ್ತು.

ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವುದಕ್ಕೆ ಹಾಗೂ ಕಠಿಣ ಪದಗಳ ಶಬ್ಧಭಂಡಾರವನ್ನೇ ಕರಗತ ಮಾಡಿಕೊಂಡಿರುವ ಶಶಿ ತರೂರ್, ಆಗಾಗ ಪದ ಚಮತ್ಕಾರಗಳ ಮೂಲಕ ಬೆರಗು ಮೂಡಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.