ಶಿಬು ಸೊರೇನ್
(ಪಿಟಿಐ ಚಿತ್ರ)
ನವದೆಹಲಿ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಸ್ಥಾಪಕ ಶಿಬು ಸೊರೇನ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
'ಶಿಬು ಸೊರೇನ್, ಜನರ ಸೇವೆಯಲ್ಲಿ ಅಚಲ ಅರ್ಪಣೆಯೊಂದಿಗೆ ಉನ್ನತ ಹುದ್ದೆಗೇರಿದ ತಳಮಟ್ಟದ ನಾಯಕರಾಗಿದ್ದರು. ಅವರಿಗೆ ಬುಡಕಟ್ಟು ಸಮುದಾಯ, ಬಡವರು, ದೀನದಲಿತರ ಸಬಲೀಕರಣದ ಬಗ್ಗೆ ವಿಶೇಷ ಒಲವು ಇತ್ತು. ಅವರ ನಿಧನವು ಬೇಸರವನ್ನುಂಟು ಮಾಡಿದೆ. ಮುಖ್ಯಮಂತ್ರಿ ಹೇಮತ್ ಸೊರೇನ್ ಅವರೊಂದಿಗೆ ಮಾತನಾಡಿ ಸಂತಾಪವನ್ನು ಸೂಚಿಸಿದ್ದೇನೆ. ಓಂ ಶಾಂತಿ' ಎಂದು ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದಾರೆ.
ಶಿಬು ಸೊರೇನ್ ಹೋರಾಟವನ್ನು ಸ್ಮರಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ಶಿಬು ಸೊರೇನ್ ತಮ್ಮ ಜೀವನ ಪರ್ಯಂತ ಜಾರ್ಖಂಡ್ ರಾಜ್ಯಕ್ಕಾಗಿ ಮತ್ತು ನೀರು, ಅರಣ್ಯ, ಭೂಮಿಯ ಮೇಲಿನ ಜನರ ಹಕ್ಕು ಹಾಗೂ ಬುಡಕಟ್ಟು ಸಂಸ್ಕೃತಿಯ ರಕ್ಷಣೆಗಾಗಿ ಹೋರಾಡಿದ್ದಾರೆ' ಎಂದಿದ್ದಾರೆ.
ಶಿಬು ಸೊರೇನ್ ನಿಧನಕ್ಕೆ ಕಂಬನಿ ಮಿಡಿದಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, 'ಬುಡಕಟ್ಟು ಸಮುದಾಯದ ಗಟ್ಟಿ ಧ್ವನಿಯಾಗಿದ್ದ ಸೊರೇನ್, ತಮ್ಮ ಜೀವನದುದ್ಧಕ್ಕೂ ಬುಡಕಟ್ಟು ಜನರ ಹಕ್ಕುಗಳಿಗಾಗಿ ಹೋರಾಡಿದರು. ಜಾರ್ಖಂಡ್ ರಾಜ್ಯದ ರಚನೆಯಲ್ಲಿ ಅವರ ಕೊಡುಗೆಯನ್ನು ಸದಾ ಸ್ಮರಿಸಲಾಗುವುದು' ಎಂದು ಹೇಳಿದ್ದಾರೆ.
'ಭಾರತದ ಬುಡಕಟ್ಟು ಹಕ್ಕುಗಳ ಚಳವಳಿಯ ಮೇರು ವ್ಯಕ್ತಿ ಶಿಬು ಸೊರೇನ್' ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದ್ದಾರೆ. ಬುಡಕಟ್ಟು ಸಮುದಾಯಗಳ ಉನ್ನತಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು ಎಂದು ಅವರು ಉಲ್ಲೇಖಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಸಂತಾಪ ಸೂಚಿಸಿದ್ದಾರೆ. 'ಬುಡಕಟ್ಟು ಸಮುದಾಯಗಳಿಗಾಗಿ ಅವರ ಹೋರಾಟ ಬದ್ಧತೆ, ಧೈರ್ಯ ಹಾಗೂ ತ್ಯಾಗ ಮತ್ತು ದೂರದೃಷ್ಟಿಯನ್ನು ಮುಂದಿನ ಪೀಳಿಗೆಯು ಸದಾ ನೆನಪಿಸಿಕೊಳ್ಳುತ್ತದೆ' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.