ಶಿಬು ಸೊರೇನ್
(ಪಿಟಿಐ ಚಿತ್ರ)
ರಾಂಚಿ/ನವದೆಹಲಿ: ಜಾರ್ಖಂಡ್ ರಾಜ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬುಡಕಟ್ಟು ಸಮುದಾಯದ ಹಿರಿಯ ಮುಖಂಡ, ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಸಂಸ್ಥಾಪಕ ಶಿಬು ಸೊರೇನ್(81) ಅವರು ಸೋಮವಾರ ನಿಧನರಾದರು.
ಮೂತ್ರ ಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆ ದೊಂದು ತಿಂಗಳಿನಿಂದ ನವದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಬೆಳಿಗ್ಗೆ 8.56ಕ್ಕೆ ಕೊನೆಯುಸಿರೆಳೆದರು.
ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೃತದೇಹವನ್ನು ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣಕ್ಕೆ ಸೋಮವಾರ ರಾತ್ರಿ ವೇಳೆಗೆ ಕರೆತರಲಾಯಿತು. ಈ ವೇಳೆ ವಿಮಾನ ನಿಲ್ದಾಣ, ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಸಾವಿರಾರು ಜನರು ಜನನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.
‘ಮಂಗಳವಾರ ಬೆಳಿಗ್ಗೆ ರಾಮಗಢ ಜಿಲ್ಲೆಯಲ್ಲಿರುವ ಅವರ ಹುಟ್ಟೂರು ನೆಮ್ರಾ ಗ್ರಾಮಕ್ಕೆ ಕೊಂಡೊಯ್ದು, ಅಲ್ಲಿಯೇ ಅಂತಿಮ ವಿಧಿ ವಿಧಾನ ಗಳನ್ನು ನಡೆಸಲಾಗುವುದು’ ಎಂದು ಜೆಎಂಎಂ ಪಕ್ಷವು ತಿಳಿಸಿದೆ.
ಸೊರೇನ್ ಅವರ ನಿಧನ ಘೋಷಣೆಯಾಗುತ್ತಿದ್ದಂತೆಯೇ, ಜಾರ್ಖಂಡ್ ವಿಧಾನಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡ ಲಾಯಿತು.
ರಾಜ್ಯದಾದ್ಯಂತ ಮೂರು ದಿನ ಶೋಕಾಚರಣೆ ಘೋಷಿಸ ಲಾಯಿತು. ಶಿಬು ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಸದಸ್ಯರು ಸಂತಾಪ ಸಲ್ಲಿಸಿ, ದಿನದ ಮಟ್ಟಿಗೆ ಸದನವನ್ನು ಮುಂದೂಡಲಾಯಿತು. ಕಳೆದ 38 ವರ್ಷಗಳಿಂದ ಜೆಎಂಎಂ ಪಕ್ಷ ಮುನ್ನಡೆಸಿದ್ದ ಸೊರೇನ್, ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು.
ಸಿಂಗ್ ಸರ್ಕಾರದ ಪಾಲಿಗೆ ಅಪತ್ಫಾಂದವ!
ಭಾರತ– ಅಮೆರಿಕ ಪರಮಾಣು ಒಪ್ಪಂದ ವಿರೋಧಿಸಿ 2008 ರಲ್ಲಿ ಎಡಪಕ್ಷಗಳು ಬೆಂಬಲವನ್ನು ಹಿಂಪಡೆದ ವೇಳೆ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಅಲ್ಪಮತಕ್ಕೆ ಕುಸಿದು ಸಂಸತ್ತಿನಲ್ಲಿ ವಿಶ್ವಾಸಮತ ಎದುರಿಸುವಂತಾಯಿತು. ಸಮ್ಮಿಶ್ರ ಸರ್ಕಾರ ಉಳಿಸಲು ಪ್ರತಿ ಮತವೂ ಮುಖ್ಯವಾಗಿತ್ತು.
ಅವಿಶ್ವಾಸ ನಿರ್ಣಯಕ್ಕೂ ಕೆಲದಿನಗಳ ಮುನ್ನ ಜೆಎಂಎಂ ಸಂಸ್ಥಾಪಕ ಶಿಬು ಸೊರೇನ್ ಹಾಗೂ ಪಕ್ಷದ ನಾಲ್ವರು ಸಂಸದರ ಜೊತೆ ದಿಢೀರ್ ನಾಪತ್ತೆಯಾಗಿದ್ದರು. ಐದು ಮಂದಿ ಎಲ್ಲಿದ್ದಾರೆ ಎಂಬುದು ಕೇಂದ್ರ ತನಿಖಾ ಸಂಸ್ಥೆಗಳಿಗೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಎಲ್ಲರೂ ಅಜ್ಞಾತವಾಗಿಯೇ ಉಳಿದಿದ್ದರು. ಅವಿಶ್ವಾಸ ಮತದಾನದ ಹಿಂದಿನ ದಿನ ದೆಹಲಿಯ ಗೋಲ್ ಮಾರುಕಟ್ಟೆಯ ಹಿಂಭಾಗದ ಮನೆಯಲ್ಲಿ ಕಾಣಿಸಿಕೊಂಡಿದ್ದ ಅವರು, ಯುಪಿಎ ಸರ್ಕಾರಕ್ಕೆ ಬೆಂಬಲ ಮುಂದುವರಿಸುವುದಾಗಿ ಪುನರುಚ್ಚರಿಸಿದ್ದರು. ಮರುದಿನ ನಡೆದ ವಿಶ್ವಾಸಮತ ಯಾಚನೆಯಲ್ಲಿ ಯುಪಿಎ ಸರ್ಕಾರ ಬೆಂಬಲಿಸಿ, ಸಿಂಗ್ ಸರ್ಕಾರ ಉಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.