ADVERTISEMENT

24 ತಾಸಿನಲ್ಲಿ ಮರಳಿ, ಮೈತ್ರಿ ತೊರೆಯಲು ಶಿವಸೇನಾ ಸಿದ್ಧ: ಬಂಡಾಯ ಶಾಸಕರಿಗೆ ರಾವುತ್

ಪಿಟಿಐ
Published 23 ಜೂನ್ 2022, 11:28 IST
Last Updated 23 ಜೂನ್ 2022, 11:28 IST
ಸಂಸದ ಸಂಜಯ್‌ ರಾವುತ್‌
ಸಂಸದ ಸಂಜಯ್‌ ರಾವುತ್‌   

ಮುಂಬೈ: ಅಸ್ಸಾಂನ ಗುವಾಹಟಿ ಸೇರಿರುವ ಮಹಾರಾಷ್ಟ್ರದ ಬಂಡಾಯ ಶಾಸಕರು 24 ಗಂಟೆಗಳಲ್ಲಿ ಮುಂಬೈಗೆ ಮರಳಿದರೆ, ಮಹಾ ವಿಕಾಸ ಆಘಾಡಿ(ಎಂವಿಎ) ಸರ್ಕಾರದಿಂದ ಹೊರ ಬರಲು ಶಿವಸೇನಾ ಸಿದ್ಧವಿದೆ ಎಂದು ಪಕ್ಷದ ಸಂಸದ ಸಂಜಯ್‌ ರಾವುತ್‌ ಹೇಳಿದ್ದಾರೆ.

ಮಹಾರಾಷ್ಟ್ರ ಶಿವಸೇನೆಯ 37 ಶಾಸಕರು ಹಾಗೂ ಒಂ‌ಭತ್ತು ಮಂದಿ ಪಕ್ಷೇತರ ಶಾಸಕರು ಶಿವಸೇನಾ ಮುಖಂಡ ಏಕನಾಥ ಶಿಂಧೆ ಅವರ ನೇತೃತ್ವದಲ್ಲಿ ಗುವಾಹಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಶಾಸಕರು ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವುದು ಮಹಾರಾಷ್ಟ್ರದಲ್ಲಿ ಬಿಕ್ಕಟ್ಟು ಸೃಷ್ಟಿಸಿದೆ. ಶಿವಸೇನಾ ಜೊತೆಗೆ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಸೇರಿ ಮಹಾ ಮೈತ್ರಿಯ ಸರ್ಕಾರ ನಡೆಸುತ್ತಿವೆ.

'ನಿಜವಾದ ಶಿವ ಸೈನಿಕರೆಂದು ಹೇಳುತ್ತಿರುವ ನೀವು, ಪಕ್ಷ ತೊರೆಯುವುದಿಲ್ಲ ಎಂದಿರುವಿರಿ. 24 ಗಂಟೆಗಳಲ್ಲಿ ನೀವು ಮುಂಬೈಗೆ ಮರಳಿ, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರೊಂದಿಗೆ ಚರ್ಚೆ ನಡೆಸುವುದಾದರೆ, ನಿಮ್ಮ ಬೇಡಿಕೆಯನ್ನು ಪರಿಗಣಿಸಲು ಸಿದ್ಧರಿದ್ದೇವೆ. ನಿಮ್ಮ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ಸಿಗಲಿದೆ. ಟ್ವಿಟರ್‌ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಪತ್ರಗಳನ್ನು ಬರೆಯಬೇಡಿ' ಎಂದು ರಾವುತ್‌ ಬಂಡಾಯ ಶಾಸಕರನ್ನು ಉದ್ದೇಶಿಸಿ ಹೇಳಿದ್ದಾರೆ.

ADVERTISEMENT

'ಮುಂಬೈನಿಂದ ಹೊರಹೋಗಿರುವ ಬಂಡಾಯ ಶಾಸಕರು ಹಿಂದುತ್ವದ ವಿಚಾರ ಎತ್ತಿದ್ದಾರೆ. ಶಿವಸೇನಾ ಪಕ್ಷವು ಮಹಾ ವಿಕಾಸ್‌ ಆಘಾಡಿಯಿಂದ ಹೊರಬರಬೇಕೆಂದು ಆ ಎಲ್ಲ ಶಾಸಕರೂ ಅಭಿಪ್ರಾಯ ಪಡುವುದಾದರೆ, ಮುಂಬೈಗೆ ಮರಳುವ ಧೈರ್ಯ ತೋರಿ....' ಎಂದಿದ್ದಾರೆ.

ಏಕನಾಥ ಶಿಂಧೆ ನೇತೃತ್ವದಲ್ಲಿ ಶಾಸಕರು ಬಂಡಾಯ ಘೋಷಿಸಿದ ಹಿನ್ನೆಲೆಯಲ್ಲಿ ಬುಧವಾರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಸಿದ್ಧನಾಗಿರುವುದಾಗಿ ಪ್ರಕಟಿಸಿದ್ದರು. ಅದರ ಬೆನ್ನಲ್ಲೇ ಮುಖ್ಯಮಂತ್ರಿ ಅಧಿಕೃತ ನಿವಾಸ ತೊರೆದು ಕುಟುಂಬದ ಮಾತೋಶ್ರೀಗೆ ಠಾಕ್ರೆ ಹೋಗಿದ್ದಾರೆ.

ಮಹಾರಾಷ್ಟ್ರದಲ್ಲಿನ ಬಲಾಬಲ

288 ಸದಸ್ಯರನ್ನು ಒಳಗೊಂಡಿರುವ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನಾ 55 ಶಾಸಕರ ಬಲ ಹೊಂದಿದೆ. ಎನ್‌ಸಿಪಿ 53, ಕಾಂಗ್ರೆಸ್‌ನ 44, ಬಹುಜನ ವಿಕಾಸ ಆಘಾಡಿ 3, ಸಮಾಜವಾದಿ ಪಕ್ಷ, ಎಐಎಂಐಎಂ ಹಾಗೂ ಪ್ರಹಾರ್‌ ಜನಶಕ್ತಿ ಪಾರ್ಟಿಯ ತಲಾ ಇಬ್ಬರು ಶಾಸಕರಿದ್ದಾರೆ. ಎಂಎನ್‌ಎಸ್‌, ಸಿಬಿಐ–ಎಂ, ಪಿಡಬ್ಲ್ಯುಪಿ, ಸ್ವಾಭಿಮಾನಿ ಪಕ್ಷ, ರಾಷ್ಟ್ರೀಯ ಸಮಾಜ ಪಾರ್ಟಿ, ಜನಸೂರ್ಯ ಶಕ್ತಿ ಪಾರ್ಟಿ ಹಾಗೂ ಕ್ರಾಂತಿಕಾರಿ ಶೆತಕರಿ ಪಕ್ಷದಿಂದ ತಲಾ ಒಬ್ಬರು ಶಾಸಕರಿದ್ದಾರೆ.

13 ಮಂದಿ ಪಕ್ಷೇತರ ಶಾಸಕರು ಹಾಗೂ ವಿರೋಧ ಪಕ್ಷ ಬಿಜೆಪಿಯಲ್ಲಿ 106 ಶಾಸಕರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.