ADVERTISEMENT

15 ದಿನವೇಕೆ ತಿಂಗಳನ್ನೇ ತೆಗೆದುಕೊಳ್ಳಿ: ಬಿಜೆಪಿ ವಿರುದ್ಧ ಸಂಜಯ್ ರಾವುತ್ ಕಿಡಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 10:34 IST
Last Updated 8 ನವೆಂಬರ್ 2019, 10:34 IST
ಸಂಜಯ್ ರಾವುತ್
ಸಂಜಯ್ ರಾವುತ್   

ಮುಂಬೈ: ಮಹಾರಾಷ್ಟ್ರ ಸರ್ಕಾರ ರಚನೆಯ ಕಗ್ಗಂಟ್ಟು ಮುಂದುವರಿದಿದ್ದು, ಏಕೈಕ ಬಹುದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಸರ್ಕಾರ ರಚಿಸುವ ಹಕ್ಕಿದೆ ಅದರಂತೆ ಸರ್ಕಾರ ರಚನೆಗೆ ಮುಂದಾಗಲಿ 15 ದಿನಗಳಷ್ಟೇ ಏಕೆ ಒಂದು ತಿಂಗಳ ಸಮಯ ತೆಗೆದುಕೊಂಡು ಬಹುಮತ ಸಾಬೀತು ಪಡಿಸಲಿ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಕಿಡಿಕಾರಿದ್ದಾರೆ.

ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಡಣವೀಸ್ ಸರ್ಕಾರ ಅವಧಿ ಮುಗಿದ ಬಳಿಕ ಮಹಾರಾಷ್ಟ್ರದ ಅಧಿಕಾರವನ್ನು ಉಳಿಸಿಕೊಳ್ಳಲು ಉಸ್ತುವಾರಿ ನೆಪದಲ್ಲಿ ಯಾವುದೇ ಪ್ರಯತ್ನ ನಡೆಸುವುದು ಸರಿಯಲ್ಲ ಎಂದಿದ್ದಾರೆ.

ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ಮತ್ತು ಅಧಿಕಾರವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಯಾವುದೇ ಪ್ರಯತ್ನ ಮಾಡಿದರೆ ಅದು ಸರಿಯಲ್ಲ. ಮುಖ್ಯಮಂತ್ರಿ ಯಾರೇ ಆಗಿದ್ದರೂ ಕೂಡ ಸಂವಿಧಾನದ ಪ್ರಕಾರ ರಾಜೀನಾಮೆ ನೀಡಬೇಕು ಎಂದು ತಿಳಿಸಿದರು.

ADVERTISEMENT

ಸರ್ಕಾರದ ಅವಧಿ ಮುಗಿದ ಬಳಿಕ ಹೊಸ ಸರ್ಕಾರ ರಚನೆಯಾಗುವವರೆಗೂ ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ದೇವೇಂದ್ರ ಫಡಣವೀಸ್ ಅವರನ್ನು ರಾಜ್ಯಪಾಲರು ಕೇಳುತ್ತಾರೆ. ಇದೇ ಅವಕಾಶವನ್ನು ಬಳಸಿಕೊಂಡು ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂಬ ವರದಿಗಳ ಬಳಿಕ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

ಎರಡೂವರೆ ವರ್ಷದ ಅವಧಿಗೆ ಮುಖ್ಯಮಂತ್ರಿ ಹುದ್ದೆಯನ್ನು ಶಿವಸೇನಾಗೆ ಬಿಟ್ಟುಕೊಡುವುದಾಗಿ ಲಿಖಿತ ಭರವಸೆ ನೀಡುವುದಾದರೆ ಮಾತ್ರ ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸಲಿ. ನಿತಿನ್ ಗಡ್ಕರಿ ಅವರು ಮುಂಬೈ ನಿವಾಸಿ, ಇಲ್ಲಿಗೆ ಬರಲು ಅವರಿಗೆ ಅನುಮತಿ ಅಗತ್ಯವಿಲ್ಲ. ಲಿಖಿತ ಭರವಸೆಗೆ ಅವರು ಒಪ್ಪಿದರೆ ಈ ವಿಚಾರವನ್ನು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ತಿಳಿಸುತ್ತೇನೆ ಎಂದರು.

ಬಿಜೆಪಿ ಮತ್ತು ಶಿವಸೇನಾ ನಡುವೆ ಮೂರನೇ ವ್ಯಕ್ತಿ ಮಧ್ಯಸ್ಥಿಕೆ ವಹಿಸುವ ಅಗತ್ಯವಿಲ್ಲ. ಶಾಸಕರ ಕುದುರೆ ವ್ಯಾಪಾರಕ್ಕೆ ಹೆದರಿ ಕಾಂಗ್ರೆಸ್‌ನ 44 ಶಾಸಕರನ್ನು ಜೈಪುರಕ್ಕೆ ಕಳುಹಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ಕರ್ನಾಟಕದ ಮಾದರಿಯು ಇಲ್ಲಿ ಮತ್ತೆ ಪುನರಾವರ್ತನೆಯಾಗುತ್ತಿದೆಯೇ? ಆದರೆ ಮಹಾರಾಷ್ಟ್ರದಲ್ಲಿ ಇದು ಸಾಧ್ಯವಾಗುವುದಿಲ್ಲ. ಇಲ್ಲೆಲ್ಲ ನಾವು ಒಬ್ಬರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.