ADVERTISEMENT

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ: ಮಮತಾ ಬ್ಯಾನರ್ಜಿಗೆ ಶಿವಸೇನಾ ಬೆಂಬಲ

ಏಜೆನ್ಸೀಸ್
Published 4 ಮಾರ್ಚ್ 2021, 19:44 IST
Last Updated 4 ಮಾರ್ಚ್ 2021, 19:44 IST
ಸಂಜಯ್‌ ರಾವುತ್‌
ಸಂಜಯ್‌ ರಾವುತ್‌   

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬದಲಿಗೆ ಟಿಎಂಸಿಗೆ ಬೆಂಬಲ ನೀಡುತ್ತೇವೆ ಎಂದು ಶಿವಸೇನಾ ವಕ್ತಾರ ಮತ್ತು ಸಂಸದ ಸಂಜಯ್ ರಾವುತ್ ಟ್ವೀಟ್ ಮಾಡಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ಶಿವಸೇನಾ ಸ್ಪರ್ಧಿಸುತ್ತದೆಯೇ ಇಲ್ಲವೇ ಎಂದು ಹಲವರು ಕೇಳಿದ್ದಾರೆ. ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ಜತೆಗಿನ ಚರ್ಚೆಯ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಬಂಗಾಳದಲ್ಲಿ ಶಿವಸೇನಾವು, ಮಮತಾ ದೀದಿ ಅವರಿಗೆ ತನ್ನ ಸಂಪೂರ್ಣ ಬೆಂಬಲ ನೀಡಲಿದೆ’ ಎಂದು ರಾವುತ್ ಘೋಷಿಸಿದ್ದಾರೆ. ಮನಿ, ಮಸಲ್ ಮತ್ತು ಮೀಡಿಯಾ ಎಂಬ ಎಲ್ಲಾ ‘ಎಂ’ಗಳನ್ನು ‘ಮ’ಮತಾ ದೀದಿ ವಿರುದ್ಧ ಬಳಸಲಾಗುತ್ತಿದೆ. ಹೀಗಾಗಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸ್ಪರ್ಧಿಸದೆ ಇರಲು ಶಿವಸೇನಾ ನಿರ್ಧರಿಸಿದೆ’ ಎಂದು ಅವರು ಹೇಳಿದ್ದಾರೆ.

ಶಿವಸೇನಾದ ನಿರ್ಧಾರವನ್ನು ಟಿಎಂಸಿ ಸ್ವಾಗತಿಸಿದೆ. ‘ಶಿವಸೇನಾದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸದೇ ಇರುವುದಕ್ಕೆ ನಾವು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ’ ಎಂದು ಟಿಎಂಸಿ ಸಂಸದ ಸೌಗತಾ ರಾಯ್ ಟ್ವೀಟ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆರ್‌ಜೆಡಿ ಮತ್ತು ಸಮಾಜವಾದಿ ಪಕ್ಷಗಳು ಕಳೆದ ವಾರವಷ್ಟೇ ಟಿಎಂಸಿಗೆ ಬೆಂಬಲ ಘೋಷಿಸಿದ್ದವು.

ADVERTISEMENT

ಈಚೆಗೆ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರು ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ಬೆಂಬಲ ಘೋಷಿಸಿದ್ದರು. ಪಶ್ಚಿಮ ಬಂಗಾಳ-ಬಿಹಾರ ಗಡಿಯಲ್ಲಿರುವ ಪಶ್ಚಿಮ ಬಂಗಾಳದ ಜಿಲ್ಲೆಗಳಲ್ಲಿ
ಟಿಎಂಸಿ ಪರವಾಗಿ ಪ್ರಚಾರ ನಡೆಸುವುದಾಗಿ ಅವರು ಹೇಳಿದ್ದಾರೆ. ಸಮಾಜವಾದಿ ಪಕ್ಷವು ಸಹ ಟಿಎಂಸಿ ಪರವಾಗಿ ಪ್ರಚಾರ ನಡೆಸುವುದಾಗಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.