ADVERTISEMENT

ಕಾಂಗ್ರೆಸ್ ಜತೆ ಸೇರಿದ ಶಿವಸೇನಾದಿಂದ ಜನತೆಗೆ ವಿಶ್ವಾಸದ್ರೋಹ: ಜಾವಡೇಕರ್‌

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 10:10 IST
Last Updated 23 ನವೆಂಬರ್ 2019, 10:10 IST
   

‘ಭ್ರಷ್ಟಾಚಾರದ ಸಮಾನಾರ್ಥಕ‘ವೆಂದೇ ಹೆಸರಾಗಿರುವ ಕಾಂಗ್ರೆಸ್‌ ಜೊತೆ ಕೈಜೋಡಿಸುವ ಮೂಲಕ ಶಿವಸೇನಾ ರಾಜ್ಯದ ಜನತೆಗೆ ದ್ರೋಹ ಬಗೆದಿದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ. ಇದೇ ವೇಳೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ದೇವೇಂದ್ರ ಫಡಣವೀಸ್‌ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವ ವಿಚಾರಕ್ಕೆ ವಿರುದ್ದವಾಗಿದ್ದ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿರುವ ಶಿವಸೇನಾ ನಿರ್ಧಾರವನ್ನು ಜಾವಡೇಕರ್‌ ಖಂಡಿಸಿದ್ದಾರೆ.

ಇಂದು ಟ್ವೀಟ್‌ ಮೂಲಕ ಫಡಣವಿಸ್‌ಗೆ ಅಭಿನಂದನೆ ಸಲ್ಲಿಸಿರುವ ಅವರು, 'ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ದೇವೇಂದ್ರ ಫಡಣವೀಸ್‌ ಅವರಿಗೆ ಅಭಿನಂದನೆಗಳು. ಫಡಣವೀಸ್‌ ಮುಖ್ಯಮಂತ್ರಿ ಆಗುತ್ತಿರುವುದು ಜನಾದೇಶಕ್ಕೆ ನೀಡಿದ ಗೌರವ,’ ಎಂದಿದ್ದಾರೆ. ಮುಂದುವರಿದ ಅವರು, ‘ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಸೇರಿ ಕಿಚಡಿ ಸರ್ಕಾರ ರಚಿಸಲು ಹೊರಟಿದ್ದು ಜನಾದೇಶಕ್ಕೆ ವಿರುದ್ದವಾಗಿತ್ತು.‘ ಎಂದು ಹೇಳಿದ್ದಾರೆ.

ADVERTISEMENT

‌‘ಜನರು ಬಿಜೆಪಿ ನೇತೃತ್ವದ ಮೈತ್ರಿಗೆ ಮತ ನೀಡಿದ್ದಾರೆ. ಆದರೆ, ಶಿವಸೇನಾ ಪಕ್ಷವು ರಾಮಮಂದಿರ ಮತ್ತು ವೀರ ಸಾವರ್ಕರ್‌ ಅವರನ್ನು ವಿರೋಧಿಸಿದ ಕಾಂಗ್ರೆಸ್‌ನೊಂದಿಗೆ ಕೈಜೋಡಿಸುವ ಮೂಲಕ ಜನ ಹಾಗೂ ಜನಾದೇಶಕ್ಕೆ ವಂಚನೆ ಮಾಡಿದೆ. ತುರ್ತು ಪರಿಸ್ಥಿತಿ ಹೇರಿದ್ದ, ಭ್ರಷ್ಟಾಚಾರಕ್ಕೆ ಸಮಾನಾರ್ಥಕವಾಗಿರುವ ಕಾಂಗ್ರೆಸ್‌ ಜೊತೆ ಶಿವಸೇನಾ ಸಂತೋಷದಿಂದಲೇ ಕೈಜೋಡಿಸಿದೆ,’ ಎಂದು ಅವರುಮತ್ತೊಂದು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

'ಶಿವಸೇನಾ ವಾದವು ಎಷ್ಟು ಅಸಂಬಂಧದಿಂದ ಕೂಡಿದೆ ಎಂದರೆ, ತಾವು(ಶಿವಸೇನಾ) ಎನ್‌ಸಿಪಿ ಜೊತೆ ಹೋದರೆ ಒಳ್ಳೆಯದು. ಆದರೆ, ಎನ್‌ಸಿಪಿ ಶಾಸಕರು ಬಿಜೆಪಿ ಜೊತೆ ಬಂದರೆ ಅದು ಕೆಟ್ಟದ್ದು. ಇವತ್ತು ನಡೆದದ್ದು ಜನಾದೇಶಕ್ಕೆ ಗೌರವ ನೀಡಿದ ಘಟನೆ,’ ಎಂದು ಜಾವಡೇಕರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂದು ಬೆಳಗ್ಗೆ ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರಬೆಳವಣಿಗೆಯಲ್ಲಿ ಬಿಜೆಪಿಯ ದೇವೇಂದ್ರ ಫಡಣವೀಸ್‌ ಮುಖ್ಯಮಂತ್ರಿಯಾಗಿ, ಎನ್‌ಸಿಪಿಯ ಅಜಿತ್‌ ಪವಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.