ಕರೂರು ಜಿಲ್ಲೆಯಲ್ಲಿ ನಡೆದ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿದ ನಂತರ ಬಿದ್ದಿರುವ ಚಪ್ಪಲಿಗಳ ರಾಶಿ
–ಎಎಫ್‌ಪಿ ಚಿತ್ರ
ಕರೂರು: ಎಲ್ಲೆಂದರಲ್ಲಿ ಬಿದ್ದ ಚಪ್ಪಲಿಗಳು, ನಜ್ಜುಗುಜ್ಜಾದ ನೀರಿನ ಬಾಟಲಿಗಳು, ಪಕ್ಷದ ಹರಿದ ಧ್ವಜಗಳು, ಬಟ್ಟೆಯ ಚೂರುಗಳು, ಮುರಿದುಬಿದ್ದ ಕಂಬಗಳು, ಕಸದ ರಾಶಿ–ಇವು ಕರೂರು ಕಾಲ್ತುಳಿತ ದುರಂತದ ಮೂಕಸಾಕ್ಷಿಗಳಾಗಿ ಕಣ್ಣೀರಿನ ಕತೆಯನ್ನು ಹೇಳುತ್ತಿವೆ. ಸಂಭ್ರಮಕ್ಕೆ ಸಾಕ್ಷಿಯಾಗಬೇಕಿದ್ದ ಸ್ಥಳದಲ್ಲಿ ಸೂತಕದ ಛಾಯೆ ಆವರಿಸಿದೆ.
ಕಾಲ್ತುಳಿತದ ಮಾಹಿತಿ ಗೊತ್ತಿರದ ಹಲವರು ಈ ಹೆದ್ದಾರಿಯಲ್ಲಿ ಬೆಳಿಗ್ಗೆ ನಡೆದು ಹೋಗುವಾಗ ದುರಂತದ ಕುರುಹುಗಳನ್ನು ಕಂಡು ಆಘಾತಕ್ಕೆ ಒಳಗಾಗಿದ್ದಾರೆ. ಸದ್ಯ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಸಾರ್ವಜನಿಕರು ಘಟನಾ ಸ್ಥಳಕ್ಕೆ ತೆರಳದಂತೆ ಸೂಚಿಸಿದ್ದಾರೆ.
ಟಿವಿಕೆ ಪಕ್ಷದ ಧ್ವಜಗಳು ಎತ್ತರದ ಕಂಬಗಳ ಮೇಲೆ ಇನ್ನೂ ಹಾರಾಡುತ್ತಿವೆ. ದೊಡ್ಡ ದೊಡ್ಡ ಸ್ಪೀಕರ್ ಬಾಕ್ಸ್‌ಗಳು, ಲೈಟ್‌ಗಳು, ಪೋಸ್ಟರ್‌ಗಳು ಮತ್ತು ಪಕ್ಷದ ಪ್ರಚಾರ ಸಾಮಗ್ರಿಗಳು ಎಲ್ಲೆಂದರಲ್ಲಿ ಬಿದ್ದಿವೆ.
ದುರಂತಕ್ಕೆ ಏನು ಕಾರಣ ಎಂಬ ಪ್ರಶ್ನೆಗೆ ಟಿವಿಕೆ ಕಾರ್ಯಕರ್ತರಾಗಲೀ, ಪದಾಧಿಕಾರಿಗಳಾಗಲೀ ಪ್ರತಿಕ್ರಿಯೆ ನೀಡುತ್ತಿಲ್ಲ.
‘ನೂಕುನುಗ್ಗಲು ಉಂಟಾಗಿದ್ದರಿಂದ ಹಲವರು ರಸ್ತೆ ಪಕ್ಕದ ಚರಂಡಿಗೆ ಬಿದ್ದರು. ಕೆಲವರು ಅಲ್ಲಿಂದ ಎದ್ದು ಬರಲು ಯತ್ನಿಸಿದರು’ ಎಂದು ರ್‍ಯಾಲಿಯಲ್ಲಿ ಪಾಲ್ಗೊಂಡು ಕಾಲ್ತುಳಿತದಿಂದ ಪಾರಾಗಿ ಬಂದಿರುವ ಯುವಕರೊಬ್ಬರು ತಿಳಿಸಿದರು.
ಕಾರ್ಯಕ್ರಮವು ಆರಂಭದಲ್ಲಿ ‘ಸಂಭ್ರಮದಂತಿತ್ತು’, ನಂತರ ‘ದುರಂತ’ವಾಗಿ ಅಂತ್ಯಗೊಂಡಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ವಿಜಯ್ ಅವರ ಮೇಲಿನ ಅಭಿಮಾನದಿಂದ ಅವರ ಹೆಸರನ್ನು ಕೂಗುತ್ತಿದ್ದೆವು. ಈ ಮಧ್ಯೆ ಕಾಲ್ತುಳಿತ ಸಂಭವಿಸಿದ್ದು ತಿಳಿಯಲೇ ಇಲ್ಲ. ಹಲವರು ಕೆಳಗೆ ಬಿದ್ದರು. ಬಿದ್ದಿರುವವರ ಮೇಲೆಯೇ ಜನರು ಕಾಲುಗಳನ್ನು ಇಟ್ಟ ಕಾರಣ ನಾಹುತ ಸಂಭವಿಸಿತು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.