ಪತ್ನಿ, ಮಗನನ್ನು ಭೇಟಿಯಾದ ಶುಭಾಂಶು ಶುಕ್ಲಾ
ಚಿತ್ರ ಕೃಪೆ: ಇನ್‌ಸ್ಟಾಗ್ರಾಂ
ಲಖನೌ: ‘ಮನೆಯಲ್ಲಿ ತಯಾರಿಸಿದ ಊಟ, ಕುಟುಂಬದೊಂದಿಗೆ ಮಾತುಕತೆ, ಭೂಮಿ ಮತ್ತು ಅದರಾಚೆಗಿನ ಕಥೆಗಳ ವಿನಿಮಯ ಹೀಗೆ ಹಲವು ಬಗೆಯ ಕಾರ್ಯಕ್ರಮಗಳು ಶುಭಾಂಶುಗೋಸ್ಕರ ಕಾಯುತ್ತಿವೆ’ ಎಂದು ಪತ್ನಿ ಕಾಮನಾ ವಿವರಿಸಿದ್ದಾರೆ.
ಆಕ್ಸಿಯಂ–4 ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಗಗನಯಾತ್ರಿಗಳು 18 ದಿನಗಳ ಅಂತರಿಕ್ಷಯಾನ ಮುಗಿಸಿ ಭೂಮಿಗೆ ವಾಪಸ್ಸಾಗಿದ್ದಾರೆ.
ಪತಿಯ ಆಗಮನದ ಖುಷಿ ಹಂಚಿಕೊಂಡಿರುವ ಶುಭಾಂಶು ಪತ್ನಿ ಕಾಮನಾ, ‘ಶುಭಾಂಶು ಈಗ ಸುರಕ್ಷಿತವಾಗಿ ಮರಳಿರುವುದರಿಂದ, ನಮ್ಮ ತಕ್ಷಣದ ಗಮನ ಅವರು ಭೂಮಿಯ ಮೇಲಿನ ಜೀವನಕ್ಕೆ ಸರಾಗವಾಗಿ ಹೊಂದಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಇರುತ್ತದೆ. ಈ ಅದ್ಭುತ ಪ್ರಯಾಣದ ಬಳಿಕ ಮತ್ತೆ ಅವರು ನಮ್ಮೊಂದಿಗೆ ಸೇರಿಕೊಳ್ಳುವುದೇ ಒಂದು ಸಂಭ್ರಮವಾಗಿದೆ. ಅವರು ಬಾಹ್ಯಾಕಾಶದಲ್ಲಿದ್ದಾಗ ಮನೆಯಲ್ಲಿ ತಯಾರಿಸಿದ ಊಟವನ್ನು ಮಿಸ್ ಮಾಡಿಕೊಳ್ಳುತ್ತಿದ್ದರು ಹೀಗಾಗಿ, ಈಗಾಗಲೇ ಅವರ ನೆಚ್ಚಿನ ಕೆಲವು ಆಹಾರವನ್ನು ತಯಾರಿಸುತ್ತಿದ್ದೇನೆ’ ಎಂದಿದ್ದಾರೆ.
ಸದ್ಯ ಶುಭಾಂಶು ಅವರು ಜುಲೈ 23ರವರಗೆ ಕ್ವಾರಂಟೈನ್‌ನಲ್ಲಿದ್ದು, ಕೆಲ ಕುಟುಂಬ ಸದಸ್ಯರ ಭೇಟಿಗೆ ಮಾತ್ರ ಅನುಮತಿಸಲಾಗಿದೆ.
ಅಂತರಿಕ್ಷಯಾನದ ಬಳಿಕ ಕುಟುಂಬವನ್ನು ಭೇಟಿಯಾದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ಶುಭಾಂಶು, ‘ಈ ಪ್ರಯಾಣ ಸವಾಲಿನದ್ದಾಗಿತ್ತು. ಭೂಮಿಗೆ ಹಿಂದಿರುಗಿ ಬಂದು ಕುಟುಂಬವನ್ನು ನನ್ನ ತೋಳುಗಳಲ್ಲಿ ಬಂಧಿಸಿಕೊಂಡಾಗ ಮನೆಯಂತೆ ಭಾಸವಾಯಿತು. ಬಾಹ್ಯಾಕಾಶ ಹಾರಾಟ ಅದ್ಭುತವಾಗಿದೆ. ಆದರೆ ಬಹಳ ಸಮಯದ ನಂತರ ನಿಮ್ಮ ಪ್ರೀತಿಪಾತ್ರರನ್ನು ನೋಡುವುದು ಅಷ್ಟೇ ಅದ್ಭುತವಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಪತ್ನಿ ಮತ್ತು ಮಗನನ್ನು ಭೇಟಿಯಾದ ಬಗ್ಗೆ ಶುಭಾಂಶು ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.