ADVERTISEMENT

PFI ಮೇಲಿನ ಕೇಸು ಹಿಂಪಡೆದ ಒಂದು ದಾಖಲೆ ನೀಡಲೂ ಸರ್ಕಾರಕ್ಕೆ ಆಗಿಲ್ಲ: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಡಿಸೆಂಬರ್ 2022, 13:34 IST
Last Updated 31 ಡಿಸೆಂಬರ್ 2022, 13:34 IST
   

ಬೆಂಗಳೂರು: ಪಿಎಫ್‍ಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಕಾಂಗ್ರೆಸ್‌ ಸರ್ಕಾರ ವಾಪಸ್ಸು ತೆಗೆದುಕೊಂಡ ಒಂದೇ ಒಂದು ದಾಖಲೆಯನ್ನೂ ರಾಜ್ಯದ ಬಿಜೆಪಿ ಸರ್ಕಾರ ನೀಡಿಲ್ಲ. ಈ ಬಗ್ಗೆ ತಿಳಿದುಕೊಳ್ಳಲು ಅಮಿತ್‌ ಶಾ ಅವರಿಗೇನು ದಾಡಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

‘ದೇಶದ ವಿರುದ್ಧದ ಕಾನೂನುಬಾಹಿರ ಚಟುವಟಿಕೆ ನಡೆಸಿದ ಪಿಎಫ್‌ಐ ಅನ್ನು ನಿಷೇಧಿಸಿದವರು ಪ್ರಧಾನಿ ನರೇಂದ್ರ ಮೋದಿ. ಆದರೆ, ಸಿದ್ದರಾಮಯ್ಯ ಮತ್ತು ಎಚ್‌.ಡಿ ಕುಮಾರಸ್ವಾಮಿ ಪಿಎಫ್‌ಐನ 1,700 ಸದಸ್ಯರ ಮೇಲಿನ ಪ್ರಕರಣಗಳನ್ನು ಹಿಂಪಡೆದರು’ ಎಂದು ಅಮಿತ್‌ ಶಾ ಅವರು ಶುಕ್ರವಾರ ಮಂಡ್ಯದಲ್ಲಿ ನಡೆದ ಕಾರ್ಯಕ್ರಮದ ವೇಳೆ ಹೇಳಿದ್ದರು.

ಈ ಆರೋಪಗಳಿಗೆ ಇಂದು ಸರಣಿ ಟ್ವೀಟ್‌ ಮಾಡುವ ಮೂಲಕ ಸಿದ್ದರಾಮಯ್ಯ ತೀಕ್ಷ್ಣ ತಿರುಗೇಟು ನೀಡಿದ್ದಾರೆ.

‘ಪಿಎಫ್‍ಐ ಮೇಲಿನ ಕೇಸುಗಳನ್ನು ನಮ್ಮ ಸರ್ಕಾರ ವಾಪಸ್ಸು ತೆಗೆದುಕೊಂಡಿದೆ ಎಂದು ನಾಜಿ ಸರ್ಕಾರದ ಪ್ರೊಪಗಾಂಡ ಸಚಿವ, ಗೋಬೆಲ್ಸ್‌ನ ಅಪರಾವತಾರವಾದ ಗೃಹಸಚಿವ ಅಮಿತ್‌ ಸುಳ್ಳು ಉಗುಳಿಹೋಗಿದ್ದಾರೆ. ಸನ್ಮಾನ್ಯ ಗೃಹ ಸಚಿವ ಅಮಿತ್‌ ಶಾ ಅವರು ಒಂದೋ ತಮ್ಮ ಸುಳ್ಳು ಆರೋಪವನ್ನು ಸಾಬೀತುಪಡಿಸಬೇಕು, ಇಲ್ಲವೇ ತಾವು ಹೇಳಿದ್ದು ಸುಳ್ಳು ಎಂದು ಕ್ಷಮೆ ಕೇಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ರಾಜ್ಯದಲ್ಲಿ ಬಿಜೆಪಿ ಪಕ್ಷದ್ದೇ ಸರ್ಕಾರ ಇದೆ. ಯಾವ ಪಿಎಫ್‌ಐ ಕಾರ್ಯಕರ್ತರ ಮೊಕದ್ದಮೆಗಳನ್ನು ನಮ್ಮ ಸರ್ಕಾರ ವಾಪಾಸ್ ಪಡೆದಿದೆ ಎನ್ನುವುದನ್ನು ಕಡತ ನೋಡಿ‌ ತಿಳಿದುಕೊಳ್ಳಲು ಅಮಿತ್‌ ಶಾ ಅವರಿಗೇನು ದಾಡಿ? ಸುಮ್ಮನೆ ಸುಳ್ಳು ಉಗುಳುವುದು ಯಾಕೆ? ನಾನು ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ತರಿಸಿಕೊಂಡಿದ್ದೇನೆ. ಬಿಜೆಪಿ ಸರ್ಕಾರವೇ ನೀಡಿರುವ ಉತ್ತರದಲ್ಲಿ ಪಿಎಫ್‍ಐ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್ಸು ತೆಗೆದುಕೊಂಡ ಒಂದೇ ಒಂದು ದಾಖಲೆಯನ್ನೂ ನೀಡಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

‘ಇದಾದ ಮೇಲೆ ಮತ್ತೊಮ್ಮೆ ಪತ್ರ ಬರೆದು ಪಿಎಫ್‍ಐ ಕಾರ್ಯಕರ್ತರ ಹೆಸರು, ಅವರ ಮೇಲಿದ್ದ ಪ್ರಕರಣ ಇವುಗಳ ಸಮಗ್ರ ದಾಖಲೆ ಕೊಡಿ ಎಂದು ವಿರೋಧ ಪಕ್ಷದ ನಾಯಕನಾಗಿ ಬಿಜೆಪಿ ಸರ್ಕಾರವನ್ನು ಕೇಳಿದ್ದೇನೆ. ಕಳೆದ 6 ತಿಂಗಳಿಂದ ಮಾಹಿತಿಯನ್ನೆ ಕೊಡದೆ ಕಡತವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಇಟ್ಟುಕೊಂಡು ಕೂತಿದ್ದಾರೆ. ಆದರೂ ನಾಚಿಕೆಯೇ ಇಲ್ಲದ ನಿರ್ಲಜ್ಜ ಬಿಜೆಪಿ ಸುಳ್ಳು ಹೇಳಿಕೊಂಡು ಓಡಾಡುತ್ತಿದೆ’ ಎಂದು ಅವರು ಟೀಕಿಸಿದ್ದಾರೆ.

‘ಇದೇ ಬಿಜೆಪಿ ಪಕ್ಷ ಎಸ್‍ಡಿಪಿಐ ಜೊತೆ ಹಲವಾರು ಕಡೆ ಒಳ ಒಪ್ಪಂದ ಮಾಡಿಕೊಂಡ ಮಾಹಿತಿ ನಮ್ಮ ಬಳಿ ಇದೆ. ಇಷ್ಟಿದ್ದರೂ ನಮ್ಮ ಮೇಲೆ ಆರೋಪ ಮಾಡುತ್ತಾರೆ. ಸದ್ಯದಲ್ಲಿಯೇ ಇವರ ಒಳ ಒಪ್ಪಂದದ ವಿವರಗಳನ್ನು ನಾನೇ ಬಿಡುಗಡೆ ಮಾಡುತ್ತೇನೆ’ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.