ADVERTISEMENT

ಸಿಖ್‌ ಸಮುದಾಯದವರೇ ಸಿ.ಎಂ ಅಭ್ಯರ್ಥಿ: ಅರವಿಂದ್ ಕೇಜ್ರಿವಾಲ್

ಪಿಟಿಐ
Published 21 ಜೂನ್ 2021, 21:51 IST
Last Updated 21 ಜೂನ್ 2021, 21:51 IST
ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಪಂಜಾಬ್‌ನ ಅಮೃತಸರದಲ್ಲಿರುವ ವಿಶ್ವ ಪ್ರಸಿದ್ಧ ಸ್ವರ್ಣ ಮಂದಿರಕ್ಕೆ ಸೋಮವಾರ ಭೇಟಿ ನೀಡಿದರು –ಪಿಟಿಐ ಚಿತ್ರ
ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಪಂಜಾಬ್‌ನ ಅಮೃತಸರದಲ್ಲಿರುವ ವಿಶ್ವ ಪ್ರಸಿದ್ಧ ಸ್ವರ್ಣ ಮಂದಿರಕ್ಕೆ ಸೋಮವಾರ ಭೇಟಿ ನೀಡಿದರು –ಪಿಟಿಐ ಚಿತ್ರ   

ಅಮೃತಸರ: ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಸಿಖ್‌ ಸಮುದಾಯದವರೇ ಆಗಿರುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಘೋಷಿಸಿದರು.

ಸೋಮವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಕುರಿತು ಪಕ್ಷದಲ್ಲಿ ಚರ್ಚೆ ನಡೆಯುತ್ತಿವೆ. ಸಮಯ ಬಂದಾಗ ಘೋಷಣೆ ಮಾಡಲಾಗುತ್ತದೆ. ಇಡೀ ಪಂಜಾಬ್‌ ಆ ವ್ಯಕ್ತಿ ಕುರಿತು ಹೆಮ್ಮೆ ಪಡುತ್ತದೆ. ಆ ವ್ಯಕ್ತಿ ನಿಶ್ಚಿತವಾಗಿ ಸಿಖ್‌ ಸಮುದಾಯದವರೇ ಆಗಿರುತ್ತಾರೆ’ ಎಂದರು. ರಾಜ್ಯದಲ್ಲಿ ಸದ್ಯದ ಆಡಳಿದಿಂದ ಜನರು ಬೇಸತ್ತಿದ್ದಾರೆ. ಅವರು ಹೊಸ ಬಗೆಯ ನಾಯಕತ್ವವನ್ನು ನಿರೀಕ್ಷಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ನಾಯಕ ನವಜೋತ್‌ಸಿಂಗ್‌ ಸಿಧು ಅವರು ಎಎಪಿ ಸೇರುತ್ತಾರೆ ಎಂಬ ವದಂತಿಯ ಬಗ್ಗೆ ಪ್ರತಿಕ್ರಿಯಿಸುತ್ತಾ, ‘ಸಿಧು ಕಾಂಗ್ರೆಸ್‌ನ ಹಿರಿಯ ನಾಯಕ. ಅವರ ಬಗ್ಗೆ ನನಗೆ ಗೌರವ ಇದೆ. ಯಾವ ನಾಯಕನ ಬಗ್ಗೆಯೂ ಹಗುರವಾಗಿ ಮಾತನಾಡಲು ಇಷ್ಟಪಡುವುದಿಲ್ಲ’ ಎಂದರು. ಸಿಧು ಜತೆಗೆ ತಾನು ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.

ADVERTISEMENT

ಮಾಜಿ ಅಧಿಕಾರಿ ಸೇರ್ಪಡೆ: ಮಾಜಿ ಎಪಿಎಸ್‌ ಅಧಿಕಾರಿ ಕುವರ್‌ ವಿಜಯ್‌ ಪ್ರತಾಪ್‌ ಸಿಂಗ್‌ ಅವರು ಆಮ್‌ ಆದ್ಮಿ ಪಕ್ಷಕ್ಕೆ ಸೋಮವಾರ ಸೇರ್ಪಡೆಯಾದರು. ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಪಕ್ಷಕ್ಕೆ ಬರಮಾಡಿಕೊಂಡರು.

2015ರಲ್ಲಿ ಪಂಜಾಬ್‌ನಲ್ಲಿ ನಡೆದಿದ್ದ ಕೋಡ್ಕಾಪುರ ಪೊಲೀಸ್‌ ಗುಂಡಿನ ದಾಳಿ ಪ್ರಕರಣ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡದಲ್ಲಿ (ಎಸ್‌ಐಟಿ) ವಿಜಯ್‌ ಪ್ರತಾಪ್‌ ಒಬ್ಬರಾಗಿದ್ದರು. ಪ್ರಕರಣದ ಕುರಿತು ಎಸ್‌ಐಟಿ ನೀಡಿದ್ದ ವರದಿಯನ್ನು ಪಂಜಾಬ್‌ ಮತ್ತು ಹರಿಯಾಣ ಕೋರ್ಟ್ ತಿರಸ್ಕರಿಸಿತ್ತು. ಜೊತೆಗೆ, ಹೊಸ ಎಸ್‌ಐಟಿ ತಂಡ ರಚಿಸಲು ಪಂಜಾಬ್‌ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ಘಟನೆ ಬಳಿಕ ತಮ್ಮ ಹುದ್ದೆಗೆ ಅವರು ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.