ಬ್ರಿಟಿಷರ ಕಾಲದ ಸೇತುವೆ ಪುನರ್‌ನಿರ್ಮಾಣ
ಚಿತ್ರಕೃಪೆ: ಎಕ್ಸ್ @CMOMaharashtra
ಮುಂಬೈ: ದಕ್ಷಿಣ ಮುಂಬೈನಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಕಾರ್ನಾಕ್ ಸೇತುವೆಯನ್ನು ಪುನರ್‌ನಿರ್ಮಿಸಲಾಗಿದ್ದು ‘ಸಿಂಧೂರ ಸೇತುವೆ’ ಎಂದು ಮರುನಾಮಕರಣ ಮಾಡಲಾಗಿದೆ. ಮುಖ್ಯಮಂತ್ರಿ ಫಡಣವೀಸ್ ಅವರು ಗುರುವಾರ ಸೇತುವೆಯನ್ನು ಉದ್ಘಾಟಿಸಿದ್ದಾರೆ.
‘ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ವಿರುದ್ಧ ಕೈಗೊಂಡ ‘ಆಪರೇಷನ್ ಸಿಂಧೂರ’ದ ವೇಳೆ ಭಾರತೀಯ ಸೈನಿಕರು ಧೈರ್ಯದಿಂದ ಹೋರಾಡಿದ್ದಾರೆ. ಭಾರತದ ರಕ್ಷಣಾ ವ್ಯವಸ್ಥೆಯ ಬಲವನ್ನು ಮತ್ತು ಭದ್ರತಾ ಸಿಬ್ಬಂದಿಗೆ ಗೌರವ ಸೂಚಿಸಲು ಸೇತುವೆಗೆ ಈ ಹೆಸರನ್ನು ಇಡಲಾಗಿದೆ’ ಎಂದು ಫಡಣವೀಸ್ ಹೇಳಿದ್ದಾರೆ.
ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾಗಿದ್ದ ಈ ಸೇತುವೆ ಪೂರ್ವ ಮುಂಬೈನಿಂದ ಪಶ್ಚಿಮ ಮುಂಬೈಅನ್ನು ಸಂಪರ್ಕಿಸುತ್ತಿತ್ತು. ಈ ಸೇತುವೆಗೆ ಕಾರ್ನಾಕ್ ಸೇತುವೆ ಎಂದು ಬ್ರಿಟಿಷರು ನಾಮಕರಣ ಮಾಡಿದ್ದರು. ಇದನ್ನು 1839 ರಿಂದ 1841ರವರೆಗೆ ಬಾಂಬೆ ಪ್ರಾಂತ್ಯದ ಗವರ್ನರ್ ಆಗಿದ್ದ ಜೇಮ್ಸ್ ರಿವೆಟ್ ಕಾರ್ನಾಕ್ ನಿರ್ಮಿಸಿದ್ದರು.
150 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಈ ಸೇತುವೆ ಸಂಚಾರಕ್ಕೆ ಸುರಕ್ಷಿತವಲ್ಲ ಎಂದು ಸೆಂಟ್ರಲ್ ರೈಲ್ವೆ 2022ರ ಆಗಸ್ಟ್‌ನಲ್ಲಿ ಹೇಳಿತ್ತು. ಹೀಗಾಗಿ ಸೇತುವೆಯನ್ನು ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಪುನರ್‌ನಿರ್ಮಾಣ ಮಾಡಿದೆ.
ಸೆಂಟ್ರಲ್ ರೈಲ್ವೆ ಹಳಿಯ ಪೂರ್ವ ಮತ್ತು ಪಶ್ಚಿಮ ಭಾಗಗಳನ್ನು ಸಂಪರ್ಕಿಸುವ ಮತ್ತು ಪಿ ಡಿ'ಮೆಲ್ಲೊ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಸೇತುವೆ, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ದಕ್ಷಿಣ ಮುಂಬೈನಲ್ಲಿ ಸಂಪರ್ಕವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.