ನವದೆಹಲಿ: ದೇಶದಲ್ಲಿ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ ಒಂದು ಲಕ್ಷಕ್ಕೂ ಅಧಿಕ! ಇಂಥ ಶಾಲೆಗಳಲ್ಲಿ 33 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
ಆಂಧಪ್ರದೇಶದಲ್ಲಿ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ ಹೆಚ್ಚು ಇದ್ದು, ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಉತ್ತರ ಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ಕರ್ನಾಟಕ ಹಾಗೂ ಲಕ್ಷದ್ವೀಪ ಇವೆ.
ಶಿಕ್ಷಣ ಸಚಿವಾಲಯವು ಬಿಡುಗಡೆ ಮಾಡಿರುವ 2024–25ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದ ದತ್ತಾಂಶದಲ್ಲಿ ಈ ಮಾಹಿತಿ ಇದೆ.
ಏಕೋಪಾಧ್ಯಾಯ ಶಾಲೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯ ದೃಷ್ಟಿಯಿಂದ ನೋಡಿದಾಗ, ಉತ್ತರ ಪ್ರದೇಶ ಅಗ್ರ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಜಾರ್ಖಂಡ್, ಪಶ್ಚಿಮ ಬಂಗಾಳ ಹಾಗೂ ಮಧ್ಯಪ್ರದೇಶ ಇವೆ ಎಂದು ಸಚಿವಾಲಯ ತಿಳಿಸಿದೆ.
ಪ್ರಮುಖ ಅಂಶಗಳು
* ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. 2022–23ನೇ ಸಾಲಿನಲ್ಲಿ 118190 ಇದ್ದ ಇಂಥ ಶಾಲೆಗಳ ಸಂಖ್ಯೆ 2023–24ನೇ ಸಾಲಿನಲ್ಲಿ 110971 ಇತ್ತು. ಶೇ 6ರಷ್ಟು ಇಳಿಕೆ ಕಂಡುಬಂದಿದೆ
* ದೆಹಲಿಯಲ್ಲಿ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ 9 ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ 4
* ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ ಲಡಾಖ್ ದಾದ್ರ ಮತ್ತು ನಗರ ಹವೇಲಿ ದಮನ್ ಮತ್ತು ದಿಯು ಹಾಗೂ ಚಂಡೀಗಢದಲ್ಲಿ ಇಂಥ ಶಾಲೆಗಳೇ ಇಲ್ಲ
* ಏಕೋಪಾಧ್ಯಾಯ ಶಾಲೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ವಿಚಾರದಲ್ಲಿ ಕರ್ನಾಟಕವು ದೇಶದಲ್ಲಿಯೇ 5ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಇಂಥ ಶಾಲೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ 223142
* ಪ್ರತಿ ಶಾಲೆಯಲ್ಲಿ ಪ್ರವೇಶ ಪಡೆಯುವ ಮಕ್ಕಳ ಸರಾಸರಿ ಸಂಖ್ಯೆ ದೃಷ್ಟಿಯಿಂದ ಚಂಡೀಗಢ ಮತ್ತು ದೆಹಲಿಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿರುವುದು ಕಂಡುಬಂದಿದೆ. ಇಲ್ಲಿ ಪ್ರತಿಶಾಲೆಯಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸರಾಸರಿ ಸಂಖ್ಯೆ ಕ್ರಮವಾಗಿ 1222 ಮತ್ತು 808
ಸಚಿವಾಲಯ ಹೇಳುವುದೇನು?
* ಬೋಧನಾ ಗುಣಮಟ್ಟ ಸುಧಾರಣೆಗೆ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಶಾಲೆಗಳ ವಿಲೀನದಂತಹ ಕ್ರಮಗಳ ಮೂಲಕ ‘ಶಾಲೆಗಳ ತರ್ಕಬದ್ಧಗೊಳಿಸುವಿಕೆ’ ಕಾರ್ಯ ಜಾರಿಗೊಳಿಸಲಾಗಿದೆ
* ಏಕೋಪಾಧ್ಯಾಯ ಶಾಲೆಗಳು ಬೋಧನೆ–ಕಲಿಕೆ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡುತ್ತವೆ. ಶೂನ್ಯ ದಾಖಲಾತಿ ಇರುವ ಶಾಲೆಗಳ ಶಿಕ್ಷಕರನ್ನು ಏಕೋಪಾಧ್ಯಾಯ ಶಾಲೆಗಳಿಗೆ ನಿಯೋಜನೆ ಮಾಡಲಾಗುತ್ತಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.