
ನವದೆಹಲಿ: ಚುನಾವಣಾ ಆಯೋಗವು 6 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮುಗಿಸಿದ್ದು, ಮತದಾರರ ಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಆಯೋಗದ ಪ್ರಕಟಣೆಯ ಪ್ರಕಾರ, ಪರಿಶೀಲನೆ ಸಮಯದಲ್ಲಿ ಬಹಳ ಪ್ರಮಾಣದ ಅನರ್ಹ ಮತದಾರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಲಾಗಿದೆ.
ಎಸ್‌ಐಆರ್ ಪೂರ್ಣಗೊಂಡಿರುವ ರಾಜ್ಯಗಳ ಪೈಕಿ, ಗುಜರಾತ್‌ನಲ್ಲಿ ಅತಿ ಹೆಚ್ಚು ಅಂದರೆ, 68,12,711 ಮತದಾರರ ಹೆಸರನ್ನು ಪಟ್ಟಿಯಿಂದ ಅಳಿಸಿಹಾಕಲಾಗಿದೆ. ಎಸ್‌ಐಆರ್‌ಗೆ ಮೊದಲು ಗುಜರಾತ್‌ನಲ್ಲಿ 5,08,43,436 ಮತದಾರರ ಹೆಸರು ಪಟ್ಟಿಯಲ್ಲಿತ್ತು. ಪರಿಷ್ಕರಣೆ ನಂತರ ಈ ಸಂಖ್ಯೆ 4,40,30,725ಕ್ಕೆ ಇಳಿದಿದೆ. ಅಂದರೆ, ಶೇ 13.40 ಕಡಿಮೆಯಾಗಿದೆ. ಮಧ್ಯಪ್ರದೇಶದಲ್ಲಿ 34,25,078 ಮತದಾರರ ಹೆಸರನ್ನು ಪಟ್ಟಿಯಿಂದ ಅಳಿಸಿ ಹಾಕಲಾಗಿದ್ದು, ಎರಡನೇ ಸ್ಥಾನದಲ್ಲಿದೆ. ಎಸ್‌ಐಆರ್‌ಗೆ ಮುನ್ನ 5,74,06,143ರಷ್ಟಿದ್ದ ಮತದಾರರ ಸಂಖ್ಯೆ ಈಗ 5,39,81,065ಕ್ಕೆ ಕುಸಿದಿದ್ದು, ಶೇ 5.97ರಷ್ಟು ಇಳಿಕೆಯಾಗಿದೆ.
ಇತರ ರಾಜ್ಯಗಳಲ್ಲೂ ಗಣನೀಯ ಪ್ರಮಾಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆಗಿದೆ. ರಾಜಸ್ಥಾನದಲ್ಲಿ ಮತದಾರರ ಸಂಖ್ಯೆ 5,46,56,215 ರಿಂದ 5,15,19,929ಕ್ಕೆ(-31,36,286) ಇಳಿದಿದೆ. ಛತ್ತೀಸಗಢದಲ್ಲಿ 2,12,30,737 ರಿಂದ 1,87,30,914ಕ್ಕೆ(-24,99,823) ಇಳಿಕೆಯಾಗಿದೆ. ಕೇರಳದಲ್ಲಿ 2,78,50,855 ರಿಂದ 2,69,53,644ಕ್ಕೆ(-8,97,211) ಇಳಿಕೆ ಕಂಡುಬಂದರೆ, ಗೋವಾದಲ್ಲಿ 11,85,034 ರಿಂದ 10,57,566ಕ್ಕೆ(-1,27,468) ಇಳಿಕೆ ಕಂಡುಬಂದಿದೆ.
ಕೇಂದ್ರಾಡಳಿತ ಪ್ರದೇಶಗಳ ಪೈಕಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮತದಾರರ ಸಂಖ್ಯೆ 3,10,404 ರಿಂದ 2,58,040ಕ್ಕೆ (-52,364), ಪುದುಚೇರಿಯಲ್ಲಿ 10,21,578 ರಿಂದ 9,44,211ಕ್ಕೆ(-77,367) ಮತ್ತು ಲಕ್ಷದ್ವೀಪದಲ್ಲಿ 57,813 ರಿಂದ 57,607ಕ್ಕೆ(-206) ಇಳಿಕೆಯಾಗಿದೆ.
ಪರಿಷ್ಕೃತ ಮತದಾರರ ಪಟ್ಟಿಯು ಅನರ್ಹ ಮತದಾರರ ಹೆಸರು ಅಳಿಸುವಿಕೆ ಮತ್ತು ಹೊಸದಾಗಿ ಸೇರ್ಪಡೆಗೊಂಡ ಅರ್ಹ ಮತದಾರರನ್ನು ಪ್ರತಿಬಿಂಬಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾವು, ಶಾಶ್ವತ ಸ್ಥಳಾಂತರ, ಬಹು ನೋಂದಣಿಗಳು ಅಥವಾ ಇತರ ಅರ್ಹತಾ ಸಮಸ್ಯೆಗಳಿಂದ ಹೆಸರನ್ನು ತೆಗೆದು ಹಾಕಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯು ನಿರಂತರ ಪ್ರಕ್ರಿಯೆಯಾಗಿ ಉಳಿದಿದೆ. ಅರ್ಹ ನಾಗರಿಕರು ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಆಯೋಗ ಹೇಳಿದೆ.
ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ತಮಿಳುನಾಡಿನ ಎಸ್‌ಐಆರ್ ದತ್ತಾಂಶ ಈ ತಿಂಗಳ ಅಂತ್ಯಕ್ಕೆ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.