ಗುಜರಾತ್‌ನ ಭುಜ್ ವಲಯದಲ್ಲಿ ವಿಜಯ ದಶಮಿ ಅಂಗವಾಗಿ ನಡೆದ ಶಸ್ತ್ರ ಪೂಜೆಯಲ್ಲಿ ಭಾಗವಹಿಸಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಮಾತನಾಡಿದರು
–ಪಿಟಿಐ ಚಿತ್ರ
ನವದೆಹಲಿ/ ಭುಜ್: ಸರ್ ಕ್ರೀಕ್ ಪ್ರದೇಶದಲ್ಲಿ ಪಾಕಿಸ್ತಾನ ಸೇನೆಯು ವಿವಾದ ಹುಟ್ಟುಹಾಕುವ ನಿಟ್ಟಿನಲ್ಲಿ ಆಕ್ರಮಣಕಾರಿ ನೀತಿ ಅನುಸರಿಸುತ್ತಿರುವ ಕುರಿತು ಭಾರತ ಕಿಡಿಕಾರಿದೆ.
‘ಯಾವುದೇ ದುಸ್ಸಾಹಸವು ಪಾಕಿಸ್ತಾನದ ಇತಿಹಾಸ ಹಾಗೂ ಭೌಗೋಳಿಕತೆಯನ್ನು ಬದಲಾಯಿಸುವಷ್ಟು ಬಲವಾದ ಪ್ರತಿಕ್ರಿಯೆಗೆ ಕಾರಣವಾಗುತ್ತದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಗಡಿ ಭಾಗವಾದ ಗುಜರಾತ್‌ನ ಭುಜ್‌ನ ಸೇನಾ ಕೇಂದ್ರದಲ್ಲಿ ದಸರಾ ಅಂಗವಾಗಿ ನಡೆದ ಸೈನಿಕರ ಜೊತೆಗೆ ಶಸ್ತ್ರ ಪೂಜೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯು ಎಲ್ಲ ಉದ್ದೇಶಗಳನ್ನು ಈಡೇರಿಸಿದೆ. ಆದರೆ, ಪಾಕಿಸ್ತಾನದೊಟ್ಟಿಗೆ ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸುವ ಉದ್ದೇಶ ಹೊಂದಿಲ್ಲ’ ಎಂದು ತಿಳಿಸಿದರು.
ಇದೇ ವೇಳೆ ವಿವಾದಾಸ್ಪದ ಸರ್ ಕ್ರೀಕ್ ಪ್ರದೇಶದಲ್ಲಿ ನಡೆಯುತ್ತಿರುವ ಚಟುವಟಿಕೆಯನ್ನು ನಿರ್ದಿಷ್ಟವಾಗಿ ಪ್ರಸ್ತಾಪಿಸಿದರು.
‘1965ರಲ್ಲಿ ಭಾರತೀಯ ಸೇನೆಯು ಲಾಹೋರ್‌ವರೆಗೂ ತಲುಪುವ ಮೂಲಕ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು. 2025ರಲ್ಲಿ ಪಾಕಿಸ್ತಾನವು ಒಂದು ವಿಚಾರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸರ್ ಕ್ರೀಕ್ ಮೂಲಕವೇ ಕರಾಚಿಗೆ ತಲುಪಲು ಒಂದು ಮಾರ್ಗವಿದೆ’ ಎಂದರು.
ಗುಜರಾತ್‌ನ ರಣ್ ಕಛ್ ಹಾಗೂ ಪಾಕಿಸ್ತಾನದ ನಡುವಿನ 96 ಕಿ.ಮೀ. ಉದ್ದದ ಸಮುದ್ರದ ಅಳಿವೆ ಪ್ರದೇಶವಾದ ‘ಸರ್ ಕ್ರೀಕ್’ ಗಡಿ ವ್ಯಾಖ್ಯಾನದ ಗೊಂದಲದ ಕಾರಣ ಉಭಯ ರಾಷ್ಟ್ರಗಳ ನಡುವೆ ವಿವಾದಸ್ಪದ ಪ್ರದೇಶವಾಗಿ ಉಳಿದಿದೆ.
‘ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಸೇನೆಯು ಸರ್ ಕ್ರೀಕ್‌ಗೆ ಹೊಂದಿಕೊಂಡ ಪ್ರದೇಶಗಳಲ್ಲಿ ಉದ್ದೇಶಪೂರ್ವಕವಾಗಿ ಮೂಲಸೌಕರ್ಯ ಅಭಿವೃದ್ಧಿಗೊಳಿಸುವ ಕಾರ್ಯದಲ್ಲಿ ತೊಡಗಿದೆ. ಭಾರತೀಯ ಸೇನೆ ಹಾಗೂ ಗಡಿ ಭದ್ರತಾ ಪಡೆ ನಿರಂತರವಾಗಿ ದೇಶದ ಗಡಿ ಕಾಯುವಿಕೆಯಲ್ಲಿ ನಿರತವಾಗಿವೆ’ ಎಂದರು.
ಭಾಷಣದ ಪ್ರಮುಖಾಂಶಗಳು
*ಆಪರೇಷನ್ ಸಿಂಧೂರದ ವೇಳೆ ಲೇಹ್‌ನಿಂದ ಸರ್ ಕ್ರೀಕ್‌ವರೆಗೂ ಭಾರತೀಯ ರಕ್ಷಣಾ ವ್ಯವಸ್ಥೆಯ ಒಳನುಗ್ಗಲು ಪಾಕಿಸ್ತಾನ ವಿಫಲ ಯತ್ನ ನಡೆಸಿತು
*ಭಾರತದ ಪ್ರತಿದಾಳಿಗೆ ಪಾಕಿಸ್ತಾನ ವಾಯುರಕ್ಷಣಾ ವ್ಯವಸ್ಥೆಯು ಇಡೀ ಜಗತ್ತಿನ ಮುಂದೆ ಬಯಲಾಯಿತು
*ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯಾದ ಕಾರಣ, ಭಾರತೀಯ ಸೇನೆಯು ಸಂಯಮ ಪ್ರದರ್ಶಿಸಿತು
* ಮೂರೂ ಸೇನೆಗಳು ಜಂಟಿಯಾಗಿ ಕೆಲಸ ಮಾಡಿದರೆ, ಪ್ರತಿ ಸವಾಲನ್ನು ಯಶಸ್ವಿಯಾಗಿ ಎದುರಿಸಬಹುದು
ಆಪರೇಷನ್ ಸಿಂಧೂರ ಭಾರತೀಯ ಸೇನೆಯು ಎಲ್ಲಾ ಉದ್ದೇಶಗಳನ್ನು ಈಡೇರಿಸಿದೆ. ಪಾಕಿಸ್ತಾನದ ಜೊತೆಗೆ ಪರಿಸ್ಥಿತಿ ಉಲ್ಬಣಗೊಳಿಸುವುದು ನಮ್ಮ ಉದ್ದೇಶವಾಗಿರಲಿಲ್ಲ.-ರಾಜನಾಥ್ ಸಿಂಗ್, ರಕ್ಷಣಾ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.