
ಪ್ರಾತಿನಿಧಿಕ ಚಿತ್ರ
ಕೃಪೆ: ಐಸ್ಟಾಕ್
ರಾಯ್‌ಸೆನ್/ದಾಮೌ (ಮಧ್ಯಪ್ರದೇಶ): ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್) ಬೂತ್ ಮಟ್ಟದ ಅಧಿಕಾರಿಗಳಾಗಿ (ಬಿಎಲ್‌ಒ) ನಿಯೋಜನೆಗೊಂಡಿದ್ದ ಇಬ್ಬರು ಶಿಕ್ಷಕರು ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದಾರೆ. ರಾಯ್‌ಸೆನ್ ಮತ್ತು ದಾಮೌ ಜಿಲ್ಲೆಗಳಲ್ಲಿ ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲಸದ ಅತಿಯಾದ ಹೊರೆ ಮತ್ತು ಗಣತಿಯ ಗುರಿ ತಲುಪಲು ಇದ್ದ ಒತ್ತಡವೇ ಸಾವಿಗೆ ಕಾರಣ ಎಂದು ಮೃತರ ಸಂಬಂಧಿಕರು ಹಾಗೂ ಸ್ನೇಹಿತರು ಆರೋಪಿಸಿದ್ದಾರೆ.
ಮೃತಪಟ್ಟ ಬಿಎಲ್‌ಒಗಳನ್ನು ರಮಾಕಾಂತ್ ಪಾಂಡೆ ಹಾಗೂ ಸೀತಾರಾಮ್ ಗೊಂಡ್ ಎಂದು ಗುರುತಿಸಲಾಗಿದೆ. ಅವರಿಬ್ಬರು ಕ್ರಮವಾಗಿ ರಾಯ್‌ಸೆನ್ ಮತ್ತು ದಾಮೌ ಜಿಲ್ಲೆಗಳಿಗೆ ನಿಯೋಜನೆಗೊಂಡಿದ್ದರು ಎನ್ನಲಾಗಿದೆ.
'ಸುಲ್ತಾನ್‌ಪುರ ಪ್ರದೇಶದಲ್ಲಿ ಶಿಕ್ಷಕರಾಗಿದ್ದ ರಮಾಕಾಂತ್ ಪಾಂಡೆ ಅವರು ಮಂಡಿದೀಪ್‌ನಲ್ಲಿ ಎಸ್‌ಐಆರ್ ಕೆಲಸದಲ್ಲಿ ನಿರತರಾಗಿದ್ದರು. ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ' ಎಂದು ಭೋಜಪುರ ವಿಧಾನಸಭಾ ಕ್ಷೇತ್ರದ ಉಪವಿಭಾಗಾಧಿಕಾರಿ ಹಾಗೂ ಚುನಾವಣಾ ನೋಂದಣಿ ಅಧಿಕಾರಿ ಚಂದ್ರಶೇಖರ್ ಶ್ರೀವಾಸ್ತವ ಶನಿವಾರ ತಿಳಿಸಿದ್ದಾರೆ. ಶವಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ ಎಂದೂ ಹೇಳಿದ್ದಾರೆ.
ದಾಮೌ ಜಿಲ್ಲೆಯ ರಾಂಜ್ರಾ ಗ್ರಾಮದಲ್ಲಿ ಬಿಎಲ್‌ಒ ಆಗಿದ್ದ ಗೊಂಡ್ ಅವರು, ಗುರುವಾರ ಸಂಜೆ ಕೆಲಸದಲ್ಲಿದ್ದಾಗಲೇ ಅನಾರೋಗ್ಯಕ್ಕೊಳಗಾಗಿದ್ದರು ಎಂದು ಜಿಲ್ಲೆ ಶಿಕ್ಷಣಾಧಿಕಾರಿ ಎಸ್.ಕೆ. ನೆಮಾ ಮಾಹಿತಿ ನೀಡಿದ್ದಾರೆ.
ಇದಲ್ಲದೆ, ರಾಯ್‌ಸೆನ್ ಜಿಲ್ಲೆಯಲ್ಲಿ ಕಳೆದ ಆರು ದಿನಗಳಿಂದ ಬಿಎಲ್‌ಒ ಒಬ್ಬರು ಕಾಣೆಯಾಗಿದ್ದಾರೆ. ಅವರನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂಬುದಾಗಿಯೂ ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.